ನಿದ್ದೆ ಬಂತೇನೆ ಹುಡುಗಿ?
ಗಿಡುಗ ಕುಕ್ಕಿದ ಎದೆಯ ನೇವರಿಸುವ
ಕೈಯ ಕೇಳಿದರೆ
ಎಲ್ಲಿ ಹುಡುಕಲಿ ಹೇಳೇ?
ಗಂಟು ಗೋಜಿನ ಬದುಕು
ಬಾಜಿ ಕಟ್ಟಿ ಕುಣಿಯುತ್ತಿದೆ
ಬೊಗಸೆ ತುಂಬಿದ ಬಣ್ಣದ ಮೀನಿಗೆ
ಆಯುಶ್ಯವೆಷ್ಟೇ?
ಹಾಸಿಗೆಯ ಧೂಳೆದ್ದು ಮುಡಿಗೆದ್ದು
ಬಿದ್ದೆ
ಬೂರುಗದ ಹೂವಾದರೂ ಆದೆಯಾ?
ನೀರಿಗಿಡಿದಿದೆ ಪಾಚಿ
ನಾದವೆಲ್ಲಿ ಹುಡುಕಲಿ ಸಖಿಯೇ?
ಎದೆಗೆ ಉಕ್ಕಿನ ಕಟ್ಟು
ತೊಡೆ ನಡುವೆ ಕಬ್ಬಿಣದ ಗೋಸಿ ಪಟ್ಟಿ,
ಕುಣಿ
ಕೂಡು
ಎಂದವರ
ಮುಖದೊಳಗೆ ಮುದದ ಮಲ್ಲಿಗೆ ನೆಟ್ಟು
ವಿರಕ್ತಳಂತಾದ ಗೆಳತಿಯೇ…
ನಿದ್ದೆ ಬಂತೇನೆ ನಿನಗೆ ಈ ಸಂತೆಯೊಳಗೂ?
ಎಷ್ಟೊಂದು ಹಂಬಲಗಳಿದ್ದವೆ ನಿನಗೆ
ಹೊಕ್ಕುಳೊಳಗೊಂದು
ಹೂವಿನ ಬೀಜ ನೆಟ್ಟು
ಸುಮದ ಸಂತೆಯ ಬೆಳೆದು
ಮಕರಂದ ಸೆಳೆದು
ಮಧು ಮಾಲತಿಯಾಗಬೇಕು
ಕುಣಿವ ಗೊಲ್ಲನ ಕೊಳಲ ಮೀಟಿ
ಮುಗಿಲ ಮೆರೆಗೋಲು ಹಿಡಿದೊಮ್ಮೆ
ನಾದವಾಗಬೇಕು
ಮೊದಲ ಮಳೆಗೆ ಬೆದೆ ಬಂದ
ಮಣಕವಾಗಬೇಕು!
ಸುಕ್ಕುಗಟ್ಟುತ್ತಿದೆ ಕನಸು
ಆನೆ ಕಾಲಡಿ ಸಿಕ್ಕ ಕಾಡು ಮಲ್ಲಿಗೆಯಂತೆ
ಕೈತೊಳೆಯುತ್ತಿದೆ ಕಣ್ಣೀರು
ಗಾಳಿ ಸೆರಗಿನ ನಿಯಮವೇನು?
ಮೀನು ನೀರಿದ್ದ ಕಡೆ
ದುಂಬಿ ಹೂವಿದ್ದ ಕಡೆ
ರಜ ಹುಟ್ಟಿ ನಡುಮನೆಗೆ ಬಾರದಿರಲಿ
ಹಗ್ಗದೊಂದಿಗೆ ಮಾತ್ರ ಬಾಜಿ ಕಟ್ಟಬೇಡ
ಕೋಮಲ ಗೋಣುಗಳ ಕೊಯ್ದು ಪಳಗಿದೆ ಅದು
ಸಂತೆ ಸೊಳ್ಳೆಗೆ ಸೂಜಿ ಮಾರುದ್ದ ಕಣೆ
ಮುಂಜಾನೆ ಅಸ್ತಿಪಂಜರವಾಗಬೇಡ

-ಡಾ. ವೆಂಕಟೇಶ ನೆಲ್ಲುಕುಂಟೆ, ಬೆಂಗಳೂರು
