“ಇದು ನಮ್ಮ-ನಿಮ್ಮದೇ ಎದೆಯಾಳದ ಅಳಲಿನ ನೋವಿನ ಕವಿತೆ. ಶತ ಶತಮಾನಗಳಿಂದ ಮಾನವತೆ ಮರೆತು ಮೆರೆಯುತ್ತಲೇ ಇರುವ ನಮ್ಮದೇ ಬದುಕುಗಳ ವಿಷಾದದ ಭಾವಗೀತೆ. ನಾವೇಷ್ತೇ ಸಾಕ್ಷರರಾದರೂ.. ನಾವೆಷ್ಟೇ ನಗರೀಕರಾದರೂ.. ಅದೆಷ್ಟೇ ಆಧುನೀಕತೆಯ ಬೆಳೆಸಿಕೊಂಡರೂ.. ನಮ್ಮೊಳಗಿನ ಆ ಸ್ವಾರ್ಥ, ಕ್ರೌರ್ಯ, ವಂಚನೆ, ಮತ್ಸರ, ಮೃಗತ್ವಗಳು ನಾಶವಾಗಿಲ್ಲ. ದಾನವತೆಯ ಮೂಲಭೂತ ಗುಣಗಳ ತೊರೆದು ಇಂದಿಗೂ ಮಮಕಾರದ ದೀಪ ಬೆಳಗಲೇ ಇಲ್ಲ. ಏನಂತೀರಾ.?”
-ವಿಷಾದದಿಂದ ಎ.ಎನ್.ರಮೇಶ್.ಗುಬ್ಬಿ.
ಅಳಲು..!
ಈ ಧರೆಯ ಮೇಲೆ
ಅದೆಷ್ಟು ನೆತ್ತರು
ಹರಿದಿದೆಯೋ..?
ಅದೆಷ್ಟು ಕಂಬನಿ
ಸುರಿದಿದೆಯೋ..??
ಆ ಗಾಳಿಯೊಳಗೆ
ಅದೆಷ್ಟು ಬೆಂಕಿ
ಉರಿದಿದೆಯೋ..?
ಅದೆಷ್ಟು ನಿಟ್ಟುಸಿರು
ಲೀನವಾಗಿದೆಯೂ..??
ಇಷ್ಟಾದರೂ ಇನ್ನೂ
ಯುಗ ಯುಗಗಳಿಂದ
ಭೂಮಿ ತಣಿದಿಲ್ಲ
ಗಾಳಿ ದಣಿದಿಲ್ಲ
ಮನಗಳು ಮಣಿದಿಲ್ಲ!
ಇಳೆಯ ಇತಿಹಾಸ
ಭೂತದ ಪರಿಹಾಸ
ಬದುಕ ಬದಲಿಸಲಿಲ್ಲ
ಮನದ ಕತ್ತಲುಗಳ
ಬೆಳಕಾಗಿಸಲೇ ಇಲ್ಲ.!
ನಿನ್ನೆಗಳ ಬಿಕ್ಕುವಿಕೆ
ನಾಳೆಗಳ ದಿಕ್ಕುಗಳಿಗೆ
ದಿಕ್ಸೂಚಿಯಾಗಲಿಲ್ಲ.!
ಬಾಳುಗಳ ಕನಲಿಕೆ
ಕೊನೆಯಾಗಲೇ ಇಲ್ಲ.!
ಚರಿತ್ರೆಯ ಪುಟಗಳಿಂದ
ನಾವೇನು ಕಲಿಯಲಿಲ್ಲ
ಎಂದೂ ಬದಲಾಗಲಿಲ್ಲ
ಇಂದಿಗೂ ನಾವಿನ್ನೂ..
ಮನುಜರಾಗಲೇ ಇಲ್ಲ.!!! 
-ಎ.ಎನ್.ರಮೇಶ್. ಗುಬ್ಬಿ
