ನಾನು ನೋಡಿದ ಸಿನಿಮಾ: ಪ್ರೇಮದ ಊರಲಿ, ಚಿತ್ರ ವಿಮರ್ಶೆ: ಡಾ. ಬಸವರಾಜ ಸಾದರ, ಬೆಂಗಳೂರು

ನನ್ನಿಬ್ಬರು ಅವ್ವಂದಿರು (ಮಕ್ಕಳು, ರಾಜೇಶ್ವರಿ ಮತ್ತು ಕವಿತಾ) ಹಾಗೂ ನನ್ನ ಶ್ರೀಮತಿ ಅನಸೂಯಾಳ ಜೊತೆಗೂಡಿ ಇವತ್ತು ‘ಪ್ರೇಮದ ಊರಲಿ’ ಸಿನಿಮಾ ನೋಡಿದೆ. ಬಹಳ ದಿನಗಳ ನಂತರ ಒಂದು ಸದಭಿರುಚಿಯ, ಸಭ್ಯ, ಸಹ್ಯ ಮತ್ತು ಇಂದಿನ ದಿನಮಾನಗಳಿಗೆ ಅಗತ್ಯವಿರುವ ಸಂದೇಶ ಕೊಡುವ ಸಿನಿಮಾ ನೋಡಿದ ಅನುಭವವಾಯ್ತು.

ನಲವತ್ತು ವರ್ಷಗಳ ಹಿಂದೆ ಹೊಲಗಳಲ್ಲಿ ಕೂಲಿ-ನಾಲಿ ಮಾಡುತ್ತ, ಬದುಕು ಕಟ್ಟಿಕೊಳ್ಳಲು ಹೆಣಗುತ್ತಿದ್ದ ನಾನು, ಕಳೆದ ವಾರ ಮತ್ತೆ ನನ್ನ ಹೊಲದಲ್ಲಿನ ಗೋವಿನ ಜೋಳದ ಕಟಾವು ಮತ್ತು ಒಕ್ಕಲು ಮುಗಿಸಿ ಬಂದಿದ್ದೆ. ಈ ವರ್ಷ ಮಳೆಯೇ ಇಲ್ಲದ್ದಕ್ಕೆ ಬೆಳೆಗಳು ನಿಂತಲ್ಲೇ ಒಣಗಿಹೋಗಿ ರೈತರ ಬಾಳು ಗೋಳಿನದಾಗುತ್ತಿರುವುದು, ಮನಸ್ಸಿಗೆ ಬೇಸರ ತರಿಸಿತ್ತು. ಇಂಥ ಹೊತ್ತಲ್ಲಿ ಈ ಸಿನಿಮಾ ನೋಡುತ್ತಿದ್ದಾಗ, ಇಡೀ ಚಿತ್ರದುದ್ದಕ್ಕೂ ಹರಿದ ಹಸಿರಿನ ಹೊನಲು, ಕಣ್ಣು ಮತ್ತು ಮನಸ್ಸಿಗೆ ಮುದ ನೀಡಿತು. ನಮ್ಮ ರೈತರೆಲ್ಲರೂ ಇಂಥ ಹಸಿರು ಕಾಣುವ ದಿನಗಳು ಬರಲಿ ಎಂದು ಮನಸಿನಲ್ಲಿ ಬಯಸುತ್ತಲೇ ಸಿನಿಮಾ ನೋಡಿದೆ. ಒಂದು ಚಿತ್ರ ತನ್ನೆಲ್ಲ ಪರಿಕರಗಳೊಂದಿಗೆ ಸಹೃದಯ ನೋಡುಗನನ್ನು ಇಡಿಯಾಗಿ ತನ್ನೊಳಗೆ ತೆಗೆದುಕೊಳ್ಳುವ ಸಹಜ ಮಾಂತ್ರಿಕತೆ ಅದರ ಜೀವಂತಿಕೆಯ ಲಕ್ಷಣವೇ ಸರಿ.

ರೈತರ ಮಕ್ಕಳಿಗೆ ಹೆಣ್ಣು ಸಿಗುತ್ತಲಿಲ್ಲವೆಂಬ ವಾಸ್ತವವನ್ನು ಸುಳ್ಳು ಮಾಡುವ ಹಾಗೆ ಈ ಚಿತ್ರದಲ್ಲಿ ಉನ್ನತ ಶಿಕ್ಷಣ ಪಡೆದ ಹುಡುಗಿ, ರೈತನ ಮಗನನ್ನೇ ಮದುವೆಯಾಗುವುದು ಒಂದು ಮಹತ್ವದ ಮತ್ತು ಸಕಾಲಿಕ ಸಂದೇಶ. ಇದು ಇಂದಿನ ಹುಡುಗಿಯರ ಮನೋಪರಿವರ್ತನೆಗೆ ಪಾಠದಂತಿದೆ. ಈ ವಸ್ತುವಿಗೆ ಪೂರಕವಾಗಿ ಮೂಡಿ ಬಂದಿರುವ ಕೃಷಿಕೃತ್ಯ ಮತ್ತು ಪರಿಸರವೇ ಇಡೀ ಚಿತ್ರದ ಮೂಲದ್ರವ್ಯ. ಅದು ನಮ್ಮ ರೈತರು ಹೊಲಗಳಲ್ಲಿ ದುಡಿಯುತ್ತಿರುವ ಹಾಗೆಯೇ ಸಹಜವಾಗಿ ಮೂಡಿ ಬಂದಿರುವುದರಿಂದ ಚಿತ್ರಕ್ಕೆ ಜೀವಂತಿಕೆ ಪ್ರಾಪ್ತವಾಗಿದೆ.

ಹೆಣ್ಣು ಮತ್ತು ಗಂಡುಗಳ ಮನಸ್ಸಿನಲ್ಲಿ ಹೊಕ್ಕು ಇಡೀ ಬದಕುಗಳನ್ನೇ ಛಿದ್ರಗೊಳಿಸುತ್ತಿರುವ ಸಂಶಯ, ಅಪನಂಬಿಕೆ ಮತ್ತು ಪಿತೂರಿಗಳು ಕೌಟುಂಬಿಕ ಬದುಕಿಗೆ ಬಹುದೊಡ್ಡ ಅಪಾಯ ತಂದೊಡ್ಡುತ್ತಿರುವುದು ಇಂದಿನ ಬಹಳ ಕೆಟ್ಟ ವಿದ್ಯಮಾನ. ಇಂಥ ಅನಿಷ್ಠಗಳನ್ನು ತಾರ್ಕಿಕ ನೆಲೆಯಲ್ಲಿ ದೂರ ಮಾಡಿ, ಸತ್ಯದ ಮುಖವನ್ನು ಅನಾವರಣ ಮಾಡಿ, ರೋಗಗ್ರಸ್ಥ ಮನಸ್ಸುಗಳಿಗೆ ಸೂಕ್ತ ಚಿಕಿತ್ಸೆ ಕೊಡುವ ಅಗತ್ಯವಿರುತ್ತದೆ. ಪ್ರಸ್ತುತ ಚಿತ್ರ ಈ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಿದೆ. ಸಂಶಯ ಹೊಕ್ಕ ಮನಸ್ಸಿನ ಹುಡುಗ ಕೊನೆಗೆ ಸತ್ಯದ ಅರಿವಾದಾಗ, ಹೆಂಡತಿಯ ಕಾಲು ಹಿಡಿದು ಕ್ಷಮೆ ಕೇಳುವ ದೃಶ್ಯವಂತೂ ನೋಡುಗರ ಹೃದಯಗಳನ್ನು ಕರಗಿಸಿಬಿಡುತ್ತದೆ; ಕಣ್ಣೀರನ್ನೇ ತರಿಸುತ್ತದೆ.

ಪ್ರೀತಿಯೆಂಬ ಚುಂಬಕ ಎಲ್ಲೆಲ್ಲಿ, ಹೇಗೆ ಹೇಗೆ ತನ್ನ ಕೆಲಸ ಮಾಡಿಸುತ್ತದೆ ಎಂಬುದನ್ನು ಹೇಳಲಾಗದು. ಪ್ರೀತಿಸಿದವರು ಅದನ್ನು ಮುಕ್ತವಾಗಿ ಹೇಳಬೇಕೋ, ಹೇಳಬಾರದೋ ಎಂಬ ಗೊಂದಲಗಳಲ್ಲಿ ಒದ್ದಾಡುತ್ತಿರುವಾಗಲೇ ಅದು ಬೇರೊಂದು ದಾರಿಯನ್ನೆ ಹಿಡಿದುಬಿಟ್ಟಿರುತ್ತದೆ. ಇಂಥಲ್ಲಿ ನೋವು-ಯಾತನೆ ಸಹಜ. ಅಂಥಲ್ಲೂ ಸಿಗುವ ಬದುಕನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಈ ಸತ್ಯವನ್ನು ಚಿತ್ರ ವಾಸ್ತವ ನೆಲೆಯಲ್ಲಿ ದೃಶ್ಯೀಕರಿಸಿ ತೋರಿಸಿದೆ. ನಡುವೆ ನಡೆಯುವ ಕ್ರಿಕೆಟ್ ಪಂದ್ಯ ನೋಡುಗರನ್ನು ನಗೆಗಡಲಲ್ಲಿ ತೇಲಿಸುತ್ತದೆ.

ಚಿತ್ರದ ಪಾತ್ರಗಳ ಆಯ್ಕೆಯಂತೂ ಅನನ್ಯವೆಂದೇ ಹೇಳಬೇಕು. ಸಹಜ ಅಭಿನಯ, ಕೃತಕತೆಯ ಲವಲೇಶವೂ ಇಲ್ಲದ ಸಂಭಾಷಣೆ- ಎಲ್ಲವೂ ಚಿತ್ರಕ್ಕೆ ತೂಕ ತಂದಿವೆ. ತನ್ನ ವಸ್ತು, ಕಣ್ಮನ ಕೋರೈಸುವ ಸುಂದರ ಫೋಟೊಗ್ರಫಿ, ಸುಮಧುರ ಸಂಗೀತ, ಅರ್ಥಪೂರ್ಣ ಹಾಡುಗಳು-ಹೀಗೆ ಚಿತ್ರ ಎಲ್ಲ ಪರಿಕರಗಳಲ್ಲೂ ಉನ್ನತಿಕೆಯನ್ನೇ ಸಾಧಿಸಿದೆ. ಲಾಂಗು, ಮಚ್ಚು, ಹೊಡೆದಾಟ, ರಕ್ತಪಾತ, ಎರಡರ್ಥದ ಹಾಡುಗಳು, ಮತೀಯತೆ ಮತ್ತು ಕೆಟ್ಟ ರಾಜಕೀಯ-ಇಂಥ ವಸ್ತುಗಳಿರುವ ಚಿತ್ರಗಳೇ ಹೆಚ್ಚುತ್ತಿರುವ ದಿನಮಾನಗಳಲ್ಲಿ, ಸದಭಿರುಚಿಯ ಹಾಗೂ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವ ಚಿತ್ರ ಇದಾಗಿರುವುದು ನಿಜಕ್ಕೂ ಸಂತಸ ತರುವ ಸಂಗತಿ.

ಚಿತ್ರ ನೋಡುತ್ತಿರುವವರ ಕಣ್ಣುಗಳು ತೇವವಾಗಿರುವುದನ್ನು ನಾನು ಗಮನಿಸಿದೆ. ಅಷ್ಠೇಕೆ ನನ್ನ ಕಣ್ಣುಗಳೇ ಒದ್ದೆಯಾಗಿದ್ದವು. ಇದು ಬರೀ ನೋಡುವ ಚಿತ್ರವಲ್ಲ, ಕೆಟ್ಟ ಮನಸ್ಸಗಳನ್ನು ಹಾಗೂ ಹದಗೆಟ್ಟ ಸಮಾಜವನ್ನು ಪರಿವರ್ತಿಸುವ ಚಿತ್ರ. ಯುವಜನಾಂಗಕ್ಕೆ ಪಾಠವಾಗುವ ಚಿತ್ರ. ಕೃಷಿಯ ಬಗ್ಗೆ ಅಭಿರುಚಿ ಹುಟ್ಟಿಸುವ ಚಿತ್ರವೂ ಹೌದು.

ಡಾ. ಬಸವರಾಜ ಸಾದರ, ಬೆಂಗಳೂರು

Leave a Reply

Your email address will not be published. Required fields are marked *