ಅನುದಿನ ಕವನ-೧೯೯೪, ಕವಿ: ಡಾ. ವೆಂಕಟೇಶ ನೆಲ್ಲುಕುಂಟೆ, ಬೆಂಗಳೂರು,

ಈ ಭೂಮಿ ಮೇಲೂ ನಕ್ಷತ್ರಗಳಿವೆ
ಇರುಳು ಕನಸುತ್ತವೆ
ಹಗಲು ಬೆಳಗುತ್ತವೆ
ಹಿರಿಯರು ಹಚ್ಚಿದ ಬೆಳಕು ಆರಿಸ ಹೊರಟವರ ಕಂಡು
ಸಿಡಿದೇಳುತ್ತವೆ

ನೆಲದ ಮೇಲಿನ ನಕ್ಷತ್ರಗಳಿಗೆ
ಇಗೋಗಳಿಲ್ಲ
ಒಂದಕ್ಕೊಂದು ಕರಗಿ
ಇನ್ನೊಂದು ಸೂರ್ಯನಾಗಲು ಸಿದ್ಧವಾಗಿವೆ
ಹಾಡುಗಳಿಗೆ
ಪದ್ಯಗಳಿಗೆ
ಕುಣಿವ ಕಾಲುಗಳಿಗೆ ಹೊಸ ಶಕ್ತಿ ಬಂದಿದೆ ಈಗ
ಸೂತಕದ ಸಂಕಟಗಳಿಗೆ ಒದಗದ ಹಾಡು
ಸಂತೆಯ ಸಂಭ್ರಮಕ್ಕಷ್ಟೇ ಸಾಕೆ?

ಮಧ್ಯವಯಸ್ಸಿನ ಹೇಡಿಗಳು ನಾವೆ
ನಮಗೆ ನಾಲಿಗೆ ಉದ್ಧ
ಕೈ ಸ್ವಲ್ಪ ತುಂಡ
ಕಣ್ಣು ಮಂಜಾಗುತ್ತಿದೆ
ಕತ್ತಲ ಬಯಕೆ ಹೆಚ್ಚಾಗುತ್ತಿದೆ
ಉರಿವ ದೊಂದಿಯಾಗಿದ್ದರೆ
ದೆವ್ವಗಳ ಆರ್ಭಟವಾದರೂ ಕಡಿಮೆಯಾಗುತ್ತಿತ್ತು

ಬಿರಿವ ಮೊಗ್ಗುಗಳ ಚಿವುಟುವುದು ಬಿಟ್ಟು
ಗೊಬ್ಬರವಾದರೆ
ಕಾಲ ಮೆಚ್ಚುತ್ತದೆ
ಹುಸಿ ಭಾಷಣಗಳ ನೊರೆ
ನೆಲಕೆ ವಿಷದ ಹೊರೆ

ದೆವ್ವಗಳು ಹೊರಿಸಿದ ನೊಗ ಹೊತ್ತು
ಆಹಾ
ಬಾರುಗೋಲಿನ ಏಟು ಅದೆಷ್ಟು ರುಚಿಯೆಂದು
ಪಾರ್ಕು
ಯೋಗ ಶಾಲೆ
ರೈಲು ಬಸ್ಸು ಕ್ಲಾಸ್ ರೂಮ್
ಜನ ಕೂಡಿದ ಕಡೆ
ಹುಳಿ ತೇಗಿನ ಕೊರಳುಗಳಿಗೆ
ಸಿಕ್ಕಿ
ಕೊರಗಿದೆ ನೆಲ
ಬೇಕಾಗಿದೆ ಬಿಡುಗಡೆ

ಇಂದು ಪಿತೃ ಪಕ್ಷ
ಮಹಾ ಅಮಾವಾಸ್ಯೆ
ಹಿರಿಯರು ದೆವ್ವಗಳಾಗದೆ ಮಕ್ಕಳ ಕಾಯಬೇಕೆಂದು
ಪ್ರಾರ್ಥಿಸುವ ದಿನ
ನಾನೂ
ಧೂಪ ಹಾಕಿ
ಕೈ ಮುಗಿದು
ಎಡೆ ನೀಡುತ್ತೇನೆ

ನೆಲದ ನಕ್ಷತ್ರಗಳಿಗೆ
ಮಾತ್ರ
ಅಮಾವಾಸ್ಯೆ ಭೀತಿಯಿಲ್ಲ
ಉರಿವ ಧಮನಿಗಳ ಬೆಳಕು
ಕಣ್ಣ ಮುಂದಿದೆ
ಸಾಕು!

-ಡಾ. ವೆಂಕಟೇಶ ನೆಲ್ಲುಕುಂಟೆ, ಬೆಂಗಳೂರು

Leave a Reply

Your email address will not be published. Required fields are marked *