ಅನುದಿನ‌ ಕವನ-೮೩೫, ಕವಿ: ಎ.ಎಂ.ಪಿ ವೀರೇಶಸ್ವಾಮಿ, ಹೊಳಗುಂದಿ, ಕವನದ ಶೀರ್ಷಿಕೆ:ಸಮತೆಯ ಸೂರ್ಯ

ಸಮತೆಯ ಸೂರ್ಯ


ಭಾರತದಿ ಉದಿಸಿದ ಬೆಳಕಿನ ಕಿರಣ
ಜಗದಗಲ ಹರಡಿತು ಸಮತೆಯ ಹೊಂಗಿರಣ
ಸಾಧನೆಯ ಹಾದಿಗೆ ಕಟ್ಟಿದೆ ಧೈರ್ಯದ ತೋರಣ
ನೀ ಬೀರಿದ ಸಮತೆಯ ಬೆಳಕೆ ಪ್ರಗತಿಗೆ ಪ್ರೇರಣ

ಭಾರತೀಯರಿಗೆಂದೆ ರಚಿಸಿದೆ ಸಂವಿಧಾನ
ಜೀವಿಸಲು ಕಲಿಸಿದೆ ವೈಚಾರಿಕತೆಯ ವಿಧಾನ
ಶಿಕ್ಷಣ ಸಂಘಟನೆ ಸಂಘರ್ಷ ತತ್ವಗಳೆ ಪ್ರಧಾನ
ಶೋಷಿತರೆದೆಯಲಿ ತುಂಬಿದೆ ಆತ್ಮಾಭಿಮಾನ

ಮನುಸ್ಮೃತಿಯ ಪ್ರಶ್ನಿಸಿದ ಧೀಮಂತ
ಮೌಡ್ಯದ ಮುಸುಕು ಸರಿಸಿದ ಮಹಾಂತ
ಅಸ್ಪ್ರುಶ್ಯತೆಯ ಜಾಡ್ಯ ಜಾಡಿಸಿದ ಸಂತ
ಶಾಂತಿ ಮಂತ್ರವ ಜಗಕೆ ಸಾರಿದ ಅರಿಹಂತ

ಅಬಲರನು ಬಲ್ಲಿದರನಾಗಿಸಿದ ಯೋಗಿ
ಹೋರಾಟದಲ್ಲಿ ಜಗ ಸುತ್ತಿದ ಜೋಗಿ
ದಲಿತರ ಏಳಿಗೆಗೆ ಸಕಲವ ತೊರೆದ ತ್ಯಾಗಿ
ಜನರ ಮನದಿ ಇಂದಿಗೂ ನೀ ಜನಾನುರಾಗಿ

ಮಾನವ ಕುಲಕೆ ನೀ ಮಹಾ ನಾಯಕ
ಜಗದ ಉದ್ದಾರಕೆ ನಿನ್ನ ತತ್ವಗಳೇ ಪ್ರೇರಕ
ಮತ್ತೊಮ್ಮೆ ಹುಟ್ಟಿ ಬಾ ,ಬಾಬಾ ಅಂಬೇಡ್ಕರ
ನಮ್ಮಯ ಹೃದಯದಿ ನೀ ಅಜರಾಮರ

-ಎ.ಎಂ.ಪಿ ವೀರೇಶಸ್ವಾಮಿ
ಹೊಳಗುಂದಿ.
*****

Leave a Reply

Your email address will not be published. Required fields are marked *