ಅನುದಿನ ಕವನ-೧೦೨೯, ಕವಿ: ಎ.ಎಂ.ಪಿ ವೀರೇಶಸ್ವಾಮಿ ಹೊಳಗುಂದಿ., ಕವನದ ಶೀರ್ಷಿಕೆ: ಜಗವಿರುವರೆಗೂ ಜೀವಂತ

ಜಗವಿರುವರೆಗೂ ಜೀವಂತ

ಕುಗ್ಗದ ಕಂಠ ಬಗ್ಗದ ದೇಹ
ಸಾವಿಗೆ ಒಗ್ಗೀತು ಹೇಗೆ?
ಬಹು ಜಟಿಲ ಪ್ರಶ್ನೆ…
ದೇವ ಲೋಕದ ಇಂದ್ರ
ಮಾನವರ ಕುಣಿಸಬೇಕಲ್ಲ ಚಂದ
ವಿಚಾರ ಮಾಡಿದ ಬಹುದಿನದಿಂದ
ನೆನಪಾಯಿತು …ಬೆಳಗಲ್ಲು

ಕರೆ ಬಂದೇ ಬಿಟ್ಟಿತು!
ಹಲೋ..ವೀರಣ್ಣಾ.ನಾನು ದೇವಣ್ಣಾ
ನೀನು ತೊಗಲುಗೊಂಬೆ
ಕುಣಿಸುವೆಯಂತೆಲ್ಲ ಚೆಂದದಿ
ದೇಶ ವಿದೇಶ ಸುತ್ತಿದೆಯಂತೆ
ದೇವ ಲೋಕಕ್ಕೂ ಬಂದು ಬಿಡಯ್ಯಾ
ನಾವು ನೋಡಬೇಕು ಗೊಂಬೆ ಕುಣಿತ
ದೇವಲೋಕದ ಕರೆಗೆ ಓಗೊಟ್ಟು
ಭೇಷ್ ಭೇಷ್ ಈಗಲೇ ಬರುವೆ! ಎನುತಾ..
ಅವಸರದಿ ಹೋಗಿಯೇ ಬಿಟ್ಟರು ..
ಗೊಂಬೆಗಳ ಇಲ್ಲಿಯೇ ಬಿಟ್ಟು…
ಹಾರ್ಮೋನಿಯಂ ಕೂಡ ಕೈ ಬಿಟ್ಟು
ಶಕುನಿ ಪಾತ್ರದ ಬಣ್ಣ ಅಳಿಸಿ ..
ಕಲಾವಿದರ ಕಣ್ಣು ತೇವವಾಗಿಸಿ..

ಹೋಗಿ ಬರುತ್ತೀನಪ್ಪಾ ನನ್ನೂರಿಗೆ
ಜತನದಿ ಕಾಯಿರಿ ನನ್ನ ಆಸ್ತಿ
ನಾನಿರದಿದ್ದರೇನಂತೆ ನೀವಿದ್ದೀರಲ್ಲ!
ಜಗವಿರುವವರಗೂ ಬೆಳೆಯಲಿ ಈ ಕಲೆ
ಕಲೆ ಜೀವಂತ ಇರುವವರೆಗೂ
ಬೆಳಗಲ್ಲು ವೀರಣ್ಣ ಜೀವಂತ..

ನಾಡೋಜ ಬೆಳಗಲ್ಲು ವೀರಣ್ಣ ಅವರೊಂದಿಗೆ ಕವಿ ಎ.ಎಂ.ಪಿ ವೀರೇಶಸ್ವಾಮಿ ದಂಪತಿ

-ಎ.ಎಂ.ಪಿ ವೀರೇಶಸ್ವಾಮಿ
ಹೊಳಗುಂದಿ.

Leave a Reply

Your email address will not be published. Required fields are marked *