ಸರಳತೆ ಪ್ರಾಮಾಣಿಕತೆ ನೈತಿಕತೆಯ ಮೂರ್ತ ಸ್ವರೂಪ ಗಾಂಧೀಜಿ -ಪತ್ರಕರ್ತ ನೇತಾಜಿ ಗಾಂಧಿ ಬಣ್ಣನೆ

ಬಳ್ಳಾರಿ, ನ.12: ಸರಳತೆ ಪ್ರಾಮಾಣಿಕತೆ ನೈತಿಕತೆ ಪಾರದರ್ಶಕತೆ ಮತ್ತು ಮಾನವೀಯತೆಯ ಮೂರ್ತ ಸ್ವರೂಪವೇ ಗಾಂಧೀಜಿ ಎಂದು ವಿಜಯಪುರದ ಪತ್ರಕರ್ತ, ಗಾಂಧಿ ಉಪಾಸಕ ನೇತಾಜಿ ಗಾಂಧಿ ಅವರು ಬಣ್ಣಿಸಿದರು.
ಅವರು ನಗರದ ಶ್ರೀಮತಿ ಸರಳಾದೇವಿ ಸತೀಶ್ ಚಂದ್ರ ಅಗರವಾಲ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಬಳ್ಳಾರಿಯ ಗಾಂಧಿ ವಿಚಾರ  ವೇದಿಕೆ ಸಂಯುಕ್ತಶ್ರಾಯದಲ್ಲಿ ಜರುಗಿದ “ಇಂದಿಗೂ ಬೇಕಾದ ಗಾಂಧಿ” ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.


ಗಾಂಧೀಜಿಯವರು ಗುಜರಾತದ ಮಣ್ಣಿನಲ್ಲಿ ಜನಿಸಿರಬಹುದು ಆದರೆ ಅವರು ಪ್ರತಿಪಾದಿಸಿದ ತತ್ವ ಸಿದ್ಧಾಂತ, ಮಾನವೀಯ ಮೌಲ್ಯಗಳಿಂದ ಇಡೀ ಜಗತ್ತಿನ ನಾಯಕರಾಗಿದ್ದಾರೆ ಎಂದು ಕೊಂಡಾಡಿದರು.
ಗಾಂಧಿ ವಿಚಾರ ವೇದಿಕೆ ಬಳ್ಳಾರಿ ಘಟಕದ ಸಂಘಟಕ
ಡಾ. ನಾಗರಾಜ್ ಬಸರಕೋಡು ಅವರು ಮಾತನಾಡಿ, ಭಾರತದ ಸ್ವತಂತ್ರ ಹೋರಾಟದ ಸಂದರ್ಭದಲ್ಲಿ ಬಳ್ಳಾರಿಗೆ ಆಗಮಿಸಿದ್ದ ಬಾಪು ನಗರದ ರೈಲು ನಿಲ್ದಾಣದಲ್ಲಿ ಎಂಟು ತಾಸು ತಂಗಿದ್ದರು ಎಂದರು. ಗಾಂಧಿ ಮತ್ತು ಬಳ್ಳಾರಿಯ ನಡುವಿನ ಸಂಬಂಧದ  ನೆನಪುಗಳನ್ನು  ಹಂಚಿಕೊಂಡ ನಾಗರಾಜ್ ಅವರು ಸರ್ವ ಸಮಸ್ಯೆಗೆ ಸರಳತೆಯೇ ಮದ್ದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ಮಂಜುನಾಥ ರೆಡ್ಡಿ ಎಚ್ ಕೆ ಅವರು, ವಿದ್ಯಾರ್ಥಿಗಳು ಗಾಂಧೀಜಿಯವರ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಗಬೇಕು ಹಾಗೂ ನಡೆ ನುಡಿಗೆ ವ್ಯತ್ಯಾಸವಿಲ್ಲದಂತೆ ಬದುಕಿದ ಮಹಾನ್ ಚೇತನ ಎಂದು ಶ್ಲಾಘಿಸಿದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ, ಸಾಹಿತಿ ಡಾ.ದಸ್ತಗೀರಸಾಬ್ ದಿನ್ನಿ ಅವರು, ದಿವಾನರ ಮನೆತನದ ಸಿರಿವಂತ ಕುಡಿ ಗಾಂಧಿ ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಆದರ್ಶ ಪುರುಷ ಎಂದರು.
ಅಧ್ಯಾಪಕರಾದ ಲಿಂಗಪ್ಪ ,ಎಂ.ಗೋವಿಂದ ಹಾಗೂ ಕವಿ ವೀರೇಂದ್ರ ರಾವಿಹಾಳ ಉಪಸ್ಥಿತರಿದ್ದರು.
ಸಹಾಯಕ ಪ್ರಾಧ್ಯಾಪಕ ರಾಮಸ್ವಾಮಿ ಅವರು ಸ್ವಾಗತಿಸಿದರು, ಸಹಾಯಕ ಪ್ರಾಧ್ಯಾಪಕ ಡಾ. ಹನುಮಂತರಾಯ ನಿರ್ವಹಿಸಿದರು. ಅಧ್ಯಾಪಕ ಪ್ರವೀಣ್ ಕುಮಾರ್ ಅವರು ವಂದಿಸಿದರು.
*****