ಅನುದಿನ ಕವನ-೧೩೭೧, ಕವಯಿತ್ರಿ: ಶಾಂತಾ ಪಾಟೀಲ್, ಸಿಂಧನೂರು, ಕವನದ ಶೀರ್ಷಿಕೆ: ಏನೆಂದು ಹೆಸರಿಡಲಿ!?

ಏನೆಂದು ಹೆಸರಿಡಲಿ!?

ಬರಬಿದ್ದ ಮನಕೆ ಮಧುರ‌ ಮಳೆ
ಸುರಿದ ಒಲವೇ..
ಮನದ ಮರುಭೂಮಿಯಲಿ
ಹಸಿರುಕ್ಕುವಂತೆ ಮಾಡಿದ ಒಲವೇ..

ಉರಿಗಾಳಿಗೆ ಸಿಲುಕಿ ನೊಂದ ಜೀವಕ್ಕೆ
ಸಾಂತ್ವನದ ತಂಪೆರೆದ ಒಲವೇ..
ಕತ್ತಲಾದ ಬಾಳಿಗೆ
ಪ್ರೀತಿಯ ಕಿರುದೀಪ ಹಚ್ಚಿಟ್ಟ ಒಲವೇ..

ಸೋತ ಉಸಿರಿಗೆ
ಭರವಸೆಯ ಹೆಗಲು ಕೊಟ್ಟ ಒಲವೇ..
ಭಾವಗಳ ಹಸಿವಿಗೆ
ಭಾವನೆಗಳ ಕೈ ತುತ್ತು ತಿನಿಸಿದ ಒಲವೇ..

ಪ್ರೇಮದಾಹಕ್ಕೆ ನಲುಮೆಯ
ಜೀವಧಾರೆ ಸುರಿಸಿ
ಮನದಿ‌ ನಲ್ಮೆಯ
ಚಿಲುಮೆಯುಕ್ಕಿಸಿದ ಒಲವೇ..

ಪರಾಜಯಗೊಂಡ ಮನಕೆ
ಪ್ರೇರಣೆ ಪ್ರೋತ್ಸಾಹ ನೀಡಿ
ಗೆಲುವಿಗೆ ರೂವಾರಿಯಾದ ಒಲವೇ…

ಮನ ಖೇದ ಗೊಂಡಾಗಲೆಲ್ಲ..
ಮುದದಿ ಸಂತೈಸುತ್ತ
ಸಂತಸ ತಂದ ಒಲವೇ…

ಬೇಸರದಿ ಮನ ನನಗೆ ಯಾರೂ ಇಲ್ಲ
ಎಂದು ದುಃಖಿಸಿದಾಗ..
ನೋವೆಕೇ..!?
ನಿನಗೆ ನಾನೇ ಎಲ್ಲವೂ ತಿಳಿದುಕೋ ಎಂದ ಒಲವೇ…

ಭಾವ ಬರಹಕ್ಕೆ ಪ್ರೇರಕವಾದ ಒಲವೇ..
ಇನ್ನೂ..ಏನೆಲ್ಲಾ…ಅನುಭೂತಿ ನೀಡಿದ
ಬರಹಕ್ಕೂ ನಿಲುಕದ ಒಲವೇ..
ನಿನಗೆ ನಾ ಕೇವಲ ಒಂದು ಪದದಲ್ಲಿ ಏನೆಂದು ಹೆಸರಿಡಲಿ!!?


-ಶಾಂತಾ ಪಾಟೀಲ್, ಸಿಂಧನೂರು
—–

Leave a Reply

Your email address will not be published. Required fields are marked *