ಅನುದಿನ ಕವನ-೧೩೭೭, ಕವಯಿತ್ರಿ: ಶ್ರೀದೇವಿ ಕೆರೆಮನೆ, ಅಂಕೋಲಾ, ಉತ್ತರ ಕನ್ನಡ

ಆರಕ್ಕೇರುವುದಿಲ್ಲ ಮೂರಕ್ಕಿಳಿಯುವುದಿಲ್ಲ ಬರಿದೆ ಕಾಯುವುದು
ದಕ್ಕದ ಅರಿವಿದ್ದರೂ ನಿರೀಕ್ಷೆ ತಪ್ಪುವುದಿಲ್ಲ ಬರಿದೆ ಕಾಯುವುದು

ಗರ್ಭಕಟ್ಟಿ ಮಗು ಜನಿಸಲು ಒಂಬತ್ತು ತಿಂಗಳಾದರು ಕಾಯಬೇಕು
ತುದಿಗಾಲಲ್ಲಿ ಕಾದರೂ ಪ್ರಸವವಾಗುವುದಿಲ್ಲ ಬರಿದೆ ಕಾಯುವುದು

ಒಂದು ಪಿಸುನುಡಿಗಾಗಿ ಅದೆಷ್ಟು ಕಾಲ ತಪಸ್ಸು ಮಾಡಬೇಕು ಹೇಳು
ಯಾವುದೇ ಕೋರಿಕೆಯನ್ನು ಒಪ್ಪಿ ಬಾಗುವುದಿಲ್ಲ ಬರಿದೆ ಕಾಯುವುದು

ಒಮ್ಮೆಯಾದರೂ ಮುಖ ತೋರು ಮತ್ತೇನನ್ನೂ ಬಯಸಿ ಕಾಡಲಾರೆ
ಸಮಯ ಸಿಕ್ಕರೂ ಕುಂಟುನೆಪಗಳು ಮುಗಿಯುವುದಿಲ್ಲ ಬರಿದೆ ಕಾಯುವುದು

ದಡಕೆ ಅಪ್ಪಿ ನೇವರಿಸುವ ಅಲೆಗಳೆಂದೂ ದಂಡೆಗೆ ಸ್ವಂತವಲ್ಲ
ಬಯಸಿ ಬಸವಳಿದು ಬೆಂಡಾದರೂ ದಕ್ಕುವುದಿಲ್ಲ
ಬರಿದೆ ಕಾಯುವುದು

ಎರಡು ದಿನ ಜೊತೆಗಿದ್ದು ನಂತರ ಮರೆತು ಬಿಡುವ ಚಟ ಹೊಸತಲ್ಲ ನಿನಗೆ
ನೀನು ಜೊತೆಗಿರದೆ ಸುರೆಯೂ ನಶೆಯೇರಿಸುವುದಿಲ್ಲ ಬರಿದೆ ಕಾಯುವುದು

ಕಳೆದು ಹೋಗಿದೆ ಎರಡು ಹಗಲು ಮೂರು ರಾತ್ರಿ ಒಂದೂ ಮಾತಿಲ್ಲದೇ
ಮನಸಿಗೆ ಮೌನದ ಸೇತುವೆ ಕಟ್ಟಲಾಗುವುದಿಲ್ಲ ಬರಿದೆ ಕಾಯುವುದು

ಮಾತು ಮಾತಿಗೂ ಹೊಗಳಿ ಅಟ್ಟಕ್ಕೇರಿಸುವ ಗುಣ ಕಲಿಸಿದವರಾರು
ಸಿರಿ ಹೊನ್ನಶೂಲದ ತುದಿಯಲ್ಲಿ ಸುಖವೆಂಬುದಿಲ್ಲ ಬರಿದೆ ಕಾಯುವುದು

-ಶ್ರೀದೇವಿ ಕೆರೆಮನೆ, ಅಂಕೋಲಾ, ಉತ್ತರ ಕನ್ನಡ

Leave a Reply

Your email address will not be published. Required fields are marked *