ಅನುದಿನ ಕವನ-೧೩೯೫, ಕವಿ: ರವೀ ಹಂಪಿ, ಕವನದ ಶೀರ್ಷಿಕೆ: ದುಃಖಿತರು

ದುಃಖಿತರು

ದುಃಖಿತರು ನಾವು
ನಮ್ಮದಲ್ಲದ ಕಾರಣಕ್ಕೆ
ಸಿಕ್ಕಿದ್ದಕ್ಕೆ ಮತ್ತು ಸಿಗಲಾರದ್ದಕ್ಕೆ
ನಕ್ಕಿದ್ದಕ್ಕೆ ಮತ್ತು ನಗಲಾರದ್ದಕ್ಕೆ
ದಕ್ಕಿದ್ದಕ್ಕೆ ಮತ್ತು ದಕ್ಕಲಾರದ್ದಕ್ಕೆ

ದುಃಖಿತರು ನಾವು
ನಮ್ಮದಲ್ಲದ ಕಾರಣಕ್ಕೆ
ನೋಡಿದ್ದಕ್ಕೆ ಮತ್ತು ನೋಡದುದಕ್ಕೆ
ನೆನೆದದ್ದಕ್ಕೆ ಮತ್ತು ನೆನೆಯಲಾರದ್ದಕ್ಕೆ
ಮರೆತದ್ದಕ್ಕೆ ಮತ್ತು ಮರೆಯಲಾರದ್ದಕ್ಕೆ

ದುಃಖಿತರು ನಾವು
ನಮ್ಮದಲ್ಲದ ಕಾರಣಕ್ಕೆ
ಕನಸಿದ್ದಕ್ಕೆ ಮತ್ತು ಕನವರಿಸಿದ್ದಕ್ಕೆ
ಎಡವಿದ್ದಕ್ಕೆ ಮತ್ತು ಎದ್ದು ನಡೆದದ್ದಕ್ಕೆ
ಹುಟ್ಟಿದ್ದಕ್ಕೆ ಮತ್ತು ಸಾಯಲಾರದ್ದಕ್ಕೆ

ದುಃಖಿತರು ನಾವು
ನಮ್ಮದಲ್ಲದ ಕಾರಣಕ್ಕೆ
ಕಂಡದ್ದಕ್ಕೆ ಮತ್ತು ಕಾಣಲಾರದ್ದಕ್ಕೆ
ಅರಿತದ್ದಕ್ಕೆ ಮತ್ತು ಅರಿಯಲಾರದ್ದಕ್ಕೆ
ತಬ್ಬಿದ್ದಕ್ಕೆ  ಮತ್ತು ತಬ್ಬಲಾಗದ್ದಕ್ಕೆ

ದುಃಖಿತರು ನಾವು
ನಮ್ಮದಲ್ಲದ ಕಾರಣಕ್ಕೆ
ಭ್ರಮಿಸಿದ್ದಕ್ಕೆ ಮತ್ತು ನಿರಸನವಾದದ್ದಕ್ಕೆ
ಬೇಡಿದ್ದಕ್ಕೆ ಮತ್ತು ಬೇಡಲಾಗದ್ದಕ್ಕೆ
ರಿಕ್ತವಾದುದಕ್ಕೆ ಮತ್ತು ರಿಕ್ತವಾಗದ್ದಕ್ಕೆ


-ರವೀ ಹಂಪಿ
—–

Leave a Reply

Your email address will not be published. Required fields are marked *