ಅನುದಿನ‌ ಕವನ-೧೪೮೨, ಕವಿ: ಪ್ರಕಾಶ್ ಕೋನಾಪುರ, ಶಿವಮೊಗ್ಗ, ಕವನದ ಶೀರ್ಷಿಕೆ: ಎದಿಯ‌ ಮಾತು

ಎದಿಯ ಮಾತು

ಎಷ್ಟೋ ಕಾಲದಿಂದ ಎದೆಯಮಡಿಕೆಯಲ್ಲಿ
ಹುದುಗಿಸಿಟ್ಟ ಮಾತುಗಳ
ನಿನ್ನೆದುರು ಬಸಿಯಬೇಕಿದೆ ಗೆಳತಿ

ಹೊರಗೆಳೆಯದ ಮಾತುಗಳು
ಗಾಯಾಗಿ ಕೀವಾಗಿ ಸೋರುವ ಮೊದಲೇ
ಮೂರನೇ ದೇಖಾವಿ ಮುಗಿದು ರಾತ್ರಿ
ಕತ್ತಲ ಬಣ್ಣ ಕಳೆದುಕೊಳ್ಳುವುದರೊಳಗೆ
ಮಾತು ಮುಗಿಸಿ ಎದ್ದು ಹೋಗಬೇಕಿದೆ ಗೆಳತಿ

ಒಲವಿನ ಓಲೆ ಬರಿಯುವ
ಕಾಯುವ ಕಾಲ ಮುಗಿಯಿತೀಗ
ದಿನವೂ ನನ್ನ ಕಣ್ಣುಗಳು
ನಿನ್ನ ಮುಖಪುಸ್ತಕದ ಎದೆಯ ಮೇಲೆ
ಸಂದೇಶದ ಒಳಪೆಟ್ಟಿಗೆಯತ್ತಲೇ ಹಾಯುತ್ತಿರುತ್ತವೆ
ನೀನು ಬರೆದ ಸಂದೇಶದ
ಅಧಿಸೂಚನೆಗೆ  ಕಾಯುತಿರುವೆ

ಹುಕಿಯಲ್ಲಿ ಹುಗ್ಗಿ ಉಗ್ಗಿದ ಚಂದ್ರ
ಈ ರಾತ್ರಿಯಲ್ಲಿ ಹೊಳೆವ ತಾರೆಯ
ಬೆಳಕಿನಲ್ಲಿ ರೀಲ್ಸನಲ್ಲಿ ನೀ ಕಿಸಕಿಸ ನಕ್ಕಿದ್ದು
ನೈಟ್ ಮೋಡ್ನಲ್ಲಿ ನೋಡಿದೆ ಗೆಳತಿ

ಬೆಳ್ಮುಗಿಲ ತುಂಡೊಂದು ಭುವಿಯ ಮೇಲೆ
ಸೆರಗ ಹಾಸಿದೆ ಗೆಳತಿ
ಚಂದ್ರ ಮುಗಿಲ ಚಾವಣಿ ಒಳಗೆ
ಸೇರುವುದರೊಳಗೆ
ಕೂಳರಸಿ ಹಕ್ಕಿಗಳ ದಿಬ್ಬಣ
ಗೂಡು ತೊರೆಯುವುದರೊಳಗೆ
ವಿಡಿಯೋ ಕಾಲ್ನಲ್ಲಿ ಬಾ ಗೆಳತಿ
ಮಾತು ಮುಗಿಸೋಣ


-ಪ್ರಕಾಶ ಕೋನಾಪುರ
ಶಿವಮೊಗ್ಗ

Leave a Reply

Your email address will not be published. Required fields are marked *