ಅನುದಿನ ಕವಿತೆ-೧೬೩೧, ಕವಿ: ಸಿದ್ದು ಜನ್ನೂರು, ಚಾಮರಾಜನಗರ, ಕವನದ ಶೀರ್ಷಿಕೆ: ಕೆಂಪು ಕವಿತೆ….

ಕೆಂಪು ಕವಿತೆ…

ನಾನು ನಿತ್ಯ
ಅವನ ನೆನಪಿಗೆಂದೆ
ಬರೆಯುತ್ತೇನೆ ಒಂದಷ್ಟು ಕವಿತೆಗಳನ್ನ…

ಸೂರ್ಯ ಕೆಂಪಗೆ ಉರಿಯುತ್ತಾನೆ
ನನ್ನದು ಅದೇ ಪಾಡು
ಉರಿಯುತ್ತಲೆ ಇದ್ದೇನೆ ನಾನು ಕೂಡ ಹಾಗೆ
ಕೆಂಡದುಂಡೆ ಕೆಂಪಗಿರುವಂತೆ…

ಅತ್ತರು ಅವನದೆ
ನಕ್ಕರು ಅವನದೆ
ಖಾಲಿ ಹಾಳೆ ಮೇಲೆ ತೇಲಿ ಬಿಟ್ಟ ಕವಿತೆಗಳಂತೆ
ನನ್ನ ಮನದ ಬೇಗುದಿ
ಕೆಂಪುಕೆಂಪೇರಿ ಸುಡುತ್ತಲೇ ಇದೆ…

ರಕ್ಕಸ ಬಿರುಗಾಳಿಯ ಕುದಿ ಕೂಡ
ಸರಸರನೇ ಎದೆಯನೊಕ್ಕಿ
ದಡಬಡಿಸಿ ಕಾಡುವಾಗ
ಹೃದಯ ತಾನೇ ಹೇಗೆ ಸಂತೈಸಿಕೊಂಡಿತು…!
ಅಲ್ಲೂ ಬಿಸಿಯುಸಿರು ಆವಿಯಾಗಿ
ಬಿಕ್ಕುತ್ತದೆ ಬಿಸಿ ಕೆಂಪು ಕವಿತೆಯಾಗಿ…

ಒಂದೊಮ್ಮೆ ಸಂಜೆಗೆ ಸೂರ್ಯ
ಕೇಂಪೇರಿ ಇಳಿಯುವಾಗ
ಬಾಗಿಲ ಸದ್ದು ಕಿರ್ರೆಂದು ಕಿರುಚಿದರೆ ಸಾಕು
ನನಗೆ ನಾನೇ ಉಬ್ಬಿ ಹೋಗಿ
ಸರಸರನೆ ಮೈದಡವಿ ಎದ್ದು
ಒಂದರ ಮೇಲೊಂದರಂತೆ ಇಳಿಯುವ
ಸೂರ್ಯ ಕಿರಣ ಕೆಂಪಿಗೆ ಮುಖಮಾಡಿ ನಿಲ್ಲುತ್ತೇನೆ
ಅವನ ದಾರಿಯ ಕಾದು…


-ಸಿದ್ದು ಜನ್ನೂರ್, ಚಾಮರಾಜನಗರ

Leave a Reply

Your email address will not be published. Required fields are marked *