ಅನುದಿನ‌ ಕವನ-೧೬೩೪, ಹಿರಿಯ ಕವಯಿತ್ರಿ: ಸವಿತಾ ನಾಗಭೂಷಣ, ಶಿವಮೊಗ್ಗ, ಕವನದ ಶೀರ್ಷಿಕೆ: ಯೋಗ

ಯೋಗ

ವೇಗವಲ್ಲ ಭೋಗವಲ್ಲ
ಕಸರತ್ತು ಅಲ್ಲವೇ….
ಪುರುಸೊತ್ತಿನಲ್ಲಿ
ಪ್ರಾಣವಾಯುವನ್ನು
ನಿರಾಳವಾಗಿ
ಶಿರದಿಂದ ಪಾದದವರಿಗೆ
ಕೋಶ ಕೋಶಗಳಿಗೆ
ಮುಟ್ಟಿಸುವುದು

ಕುಣಿಯುವ ಮನವನ್ನು
ತೆಪ್ಪಗೆ ಕೂರಿಸಿ
ಮನದ ಮುಂದೆ
ಹಾಗೆ ಬಂದು
ಹೀಗೆ ಹೋಗುವುದನ್ನು
ಸುಮ್ಮನೆ ವಿಚಾರಿಸಿ
ಬಿಟ್ಟು ಬಿಡುವುದು

ಕಳದೆ, ಕೊಲದೆ, ಹುಸಿಯ ನುಡಿಯದೆ.
ತನ್ನ ಬಣ್ಣಿಸದೆ, ಹಳಿಯದೆ.
ಅಸಹ್ಯ ಪಡದೆ.
ಚಳಿಗಾಳಿ ಮಳೆ ಬಿಸಿಲಿಗೆ ಮೈಯೊಡ್ಡಿ
ದುಡಿದು ದಣಿದು ತಣಿದು ನಿದಿರೆಗೆ
ಒಪ್ಪಿಸಿ ಕನಸ ತಪ್ಪಿಸಿಕೊಂಡರೆ….
ಅದೂ ಮಹಾಯೋಗವೇ….
ಬಾರದು ಭವರೋಗ !

ಅಂತೆ-ಕಂತೆ
ಅವರಿವರು ಹೇಳಿದ್ದು ಕೇಳಿದ್ದು
ಜಗಿದು ನುಂಗಿದ್ದು !
ನಾ ಕಾಣೆ ,ಅರಿಯೆ, ಈ ಹೊತ್ತಿನ
ಯೋಗದ ವೈಭೋಗ!


-ಸವಿತಾ ನಾಗಭೂಷಣ, ಶಿವಮೊಗ್ಗ
—–

[ಯೋಗದ ಚಿತ್ರಕೃಪೆ: ಅಂತರ್ಜಾಲ]

Leave a Reply

Your email address will not be published. Required fields are marked *