ಯಾರೇನೇ ಅಂದರೂ ಅಭಿವೃದ್ಧಿ ಕೆಲಸಗಳು ನಿಲ್ಲವು: ಶಾಸಕ ನಾರಾ ಭರತ್ ರೆಡ್ಡಿ

ಬಳ್ಳಾರಿ, ಸೆ.23: ಪರ ಊರಿನಿಂದ ಬಂದವರು ಬಳ್ಳಾರಿ ಅಭಿವೃದ್ಧಿಯಾಗುತ್ತಿದೆ ಎನ್ನುತ್ತಾರೆ, ಆದರೆ ನಮ್ಮವರೇ ಕೆಲವರು ಕೊಂಕು ಮಾತುಗಳನ್ನಾಡುತ್ತಾರೆ; ಯಾರೇನೇ ಅಂದರೂ ಅಭಿವೃದ್ಧಿ ಕೆಲಸಗಳು ನಿಲ್ಲುವುದಿಲ್ಲ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ನಗರದ ನಲ್ಲಚೆರುವು ಪ್ರದೇಶದ ಮಹರ್ಷಿ ವಾಲ್ಮೀಕಿ ಭವನದಲ್ಲಿ ಮಹಾನಗರ ಪಾಲಿಕೆ, ಜಿಲ್ಲಾಡಳಿತ ವತಿಯಿಂದ ಏರ್ಪಡಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಳ್ಳಾರಿ ಐತಿಹಾಸಿಕ ನಗರ, ನಮ್ಮ ಮಕ್ಕಳು ಬೇರೆ ಊರುಗಳಿಗೆ ನಮ್ಮೂರು ಈ ಊರಿಗಿಂತ ಚೆನ್ನಾಗಿದೆ ಎಂಬ ಭಾವನೆ ತಾಳಬೇಕು, ನಮ್ಮ ಮುಂದಿನ ಪೀಳಿಗೆಗೆ ಅನುಕೂಲ ಆಗುವ ರೀತಿಯಲ್ಲಿ ನಗರದ ಅಭಿವೃದ್ಧಿ ಮಾಡುವುದು ನನ್ನ ಕನಸು, ನನ್ನ ಯೋಚನೆಗೆ ಪೌರ ಕಾರ್ಮಿಕರ ಬೆಂಬಲ ಸದಾ ಇರುತ್ತದೆಂದು ನಂಬಿರುವೆ ಎಂದರು.
ಋಣಾತ್ಮಕವಾಗಿ ಮಾತನಾಡುವವರು ಏನು ಮಾಡಿದರೂ ಮಾತನಾಡುತ್ತಾರೆ ಎಂದ ಅವರು, ಅನುದಾನ ತಂದು ಅಭಿವೃದ್ಧಿ ಮಾಡಿದರೆ ಇದು ಅಗತ್ಯ ಇದೆಯೇ ಎನ್ನುತ್ತಾರೆ, ಪೂರ್ಣಗೊಂಡ ಕಾಮಗಾರಿ ಉದ್ಘಾಟಿಸುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಬೇಕೆಂದು ವಿಪಕ್ಷದವರಿಗೆ ಇವರೇ ಹೇಳುತ್ತಾರೆ, ಕನಕದುರ್ಗಮ್ಮ ದೇವಿಯ ಆಶೀರ್ವಾದ ಮತ್ತು ಜನರ ಬೆಂಬಲ ಇರುವವರೆಗೆ ನಾನು ಯಾವ ವಿರೋಧವನ್ನೂ ಲೆಕ್ಕಿಸುವುದಿಲ್ಲ, ಮಾಡಬೇಕೆಂದಿರುವ ಕಾರ್ಯ ಮಾಡಿ ಮುಗಿಸುವೆ ಎಂದರು.
ಪೌರ ಕಾರ್ಮಿಕರ ಶ್ರಮವನ್ನು ಕೊಂಡಾಡಿದ ಶಾಸಕ ನಾರಾ ಭರತ್ ರೆಡ್ಡಿ, ಇಡೀ ನಗರವನ್ನು ನಿಮ್ಮ ಮನೆ ಎಂದು ಭಾವಿಸಿ ಸ್ವಚ್ಛಗೊಳಿಸುವ ನಿಮ್ಮ ಕೆಲಸ ಮಹತ್ವದ್ದು, ನಿಮ್ಮ ಬಹುದಿನದ ಬೇಡಿಕೆಯಾಗಿರುವ ಖಾಯಂ ಆಗದ 120 ಜನ ಪೌರ ಕಾರ್ಮಿಕರ ಕೆಲಸಗಳನ್ನು ಶೀಘ್ರ ಖಾಯಂಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಇದಕ್ಕೂ ಮುನ್ನ ನೂತನ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ ಅವರು ಮಾತನಾಡಿ; ಬಳ್ಳಾರಿಗೆ ಬರುವ ಮೊದಲು ನಗರ ಸ್ವಚ್ಛತೆ ಬಗ್ಗೆ ನನಗೆ ಪೂರ್ವಾಗ್ರಹ ಇತ್ತು, ಆದರೆ ನಗರ ಸಾಕಷ್ಟು ಸ್ವಚ್ಛವಾಗಿದೆ. ರಸ್ತೆ ಅಗಲೀಕರಣ, ಒಳ ಚರಂಡಿ – ಹೊರ ಚರಂಡಿ ನಿರ್ಮಾಣ ಈಗಾಗಲೇ ಆರಂಭವಾಗಿದೆ. ಶಾಸಕರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ, ನಾನು ಮಾಡಬೇಕೆಂಬ ಕೆಲಸಗಳನ್ನು ಈಗಾಗಲೇ ಕೈಗೆತ್ತಿಕೊಳ್ಳಲಾಗಿದೆ. ಇದಕ್ಕಾಗಿ ಜನಪ್ರತಿನಿಧಿಗಳನ್ನು ಅಭಿನಂದಿಸಲೇಬೇಕು ಎಂದರು.
ರಸ್ತೆ ಅಗಲೀಕರಣ ಅತ್ಯಂತ ತ್ರಾಸದಾಯಕ ಕೆಲಸ, ಅದರಲ್ಲೂ ನಿರಂತರ ಅಭಿವೃದ್ಧಿ ನಡೆಯುವ ಪ್ರದೇಶಗಳಲ್ಲಿ ಪೌರ ಕಾರ್ಮಿಕರ ಕೆಲಸ ಸವಾಲಿನದ್ದು ಎಂದು ಹೇಳಿದ ಅವರು, ನಿವೃತ್ತರಾಗುವ ಪೌರ ಕಾರ್ಮಿಕರಿಗೆ ಪಿಂಚಣಿ ಸೇರಿದಂತೆ ವಿವಿಧ ಕಾರ್ಯಗಳನ್ನು ಶೀಘ್ರ ಮಾಡಿ ಕೊಡಲು ಕ್ರಮ, ನಿಯಮಿತವಾಗಿ ಆರೋಗ್ಯ ತಪಾಸಣೆ, ಕ್ಷಯ ರೋಗ ಪತ್ತೆಯಂತಹ ಪರೀಕ್ಷೆಗಳನ್ನು ಮಾಡಿಸಲಾಗುವುದು ಎಂದು ಹೇಳಿದರು.
ಮಹಾನಗರ ಪಾಲಿಕೆಯ ಆಯುಕ್ತ ಮಂಜುನಾಥ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.
ಮೇಯರ್ ಮುಲ್ಲಂಗಿ ನಂದೀಶ್, ಉಪ ಮೇಯರ್ ಡಿ.ಸುಕುಂ, ಮಾಜಿ ಮೇಯರ್ ಎಂ.ರಾಜೇಶ್ವರಿ, ಸದಸ್ಯರಾದ ರಾಮಾಂಜನೇಯ, ಕುಬೇರಾ, ಪದ್ಮರೋಜ, ನಾಜು, ಗುಡಿಗಂಟಿ ಹನಮಂತು, ಹನುಮಂತಪ್ಪ, ಕಾಂಗ್ರೆಸ್ ಮುಖಂಡರಾದ ಹೊನ್ನಪ್ಪ, ಹಗರಿ ಗೋವಿಂದ, ನಾಗಲಕೆರೆ ಗೊವಿಂದ, ಪಿ.ಜಗನ್, ಎಂ.ವಿವೇಕ್, ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ರಾಮುಡು ಸೇರಿದಂತೆ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರು ಹಾಗೂ ಸಿಬ್ಬಂದಿಗಳು ಮತ್ತಿತರರು ಹಾಜರಿದ್ದರು.