ಸರಳಾದೇವಿ ಕಾಲೇಜು ಜ್ಞಾನ ಸಿಂಚನ ಹಳೇ ವಿದ್ಯಾರ್ಥಿಗಳ ಸಂಘದಿಂದ ಶಿಕ್ಷಕರ ದಿನಾಚರಣೆ: ಕಾಲೇಜಿನ ಅಭಿವೃದ್ಧಿಗೆ ಸಂಪೂರ್ಣ ಸಹಕಾರ -ನಾರಾ ಭರತ್ ರೆಡ್ಡಿ

ಬಳ್ಳಾರಿ: ನಗರದ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ
“ಜ್ಞಾನ ಸಿಂಚನ” ಹಳೆ ವಿದ್ಯಾರ್ಥಿಗಳ ಸಂಘದಿಂದ ಸೋಮವಾರ  ಕಾಲೇಜಿನ ಸಭಾಂಗಣದಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ಇದೇ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ  ಹಳೆಯ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ನಡೆಯಿತು.

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ  ನಗರ ಶಾಸಕ ನಾರಾ ಭರತ್ ರೆಡ್ಡಿ  ಅವರು,
ಇದೇ ಕಾಲೇಜಿನಲ್ಲಿ ಉಪನ್ಯಾಸಕರಾದವರಿಗೆ ಸನ್ಮಾನ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.                                                ಸಂಘ ಬಳ್ಳಾರಿ ನಗರದ ಅಭಿವೃದ್ಧಿಗೆ ಸಹಕಾರ ನೀಡುವುದರ ಜತೆಗೆ ಕಾಲೇಜಿನಲ್ಲಿ  ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ  ಬಡ ವಿದ್ಯಾರ್ಥಿಗಳಿಗೆ ನೆರವು‌ ನೀಡಲಿ ಎಂದು ಸಲಹೆ ನೀಡಿದರು.

ಕಾಲೇಜಿನ ಅಭಿವೃ ದ್ಧಿಗೆ ಒಟ್ಟು 7 ಕೋಟಿ ಅನುದಾನ ನೀಡಿದೆ.  ಸಭಾಂಗಣಕ್ಕೆ ಒಂದೂವರೆ ಕೋಟಿ ರೂ ವೆಚ್ಚದಲ್ಲಿ ಇನ್ನಿತರ ಕಾಮಗಾರಿ ಕೈಗೊಳ್ಳಲಿದೆ. ಈ ಕಾಲೇಜು ಅಭಿವೃದ್ಧಿಗೆ ನನ್ನ ಸಂಪೂರ್ಣ ಸಹಕಾರ ಇದೆ. ನಮ್ಮೆಲರ ಕನಸಿನಿಂದ ಕಾಲೇಜಿನ ಸಮಗ್ರ ಅಭಿವೃದ್ಧಿ ಅಗಲಿ ಎಂದರು.

ಕಾಲೇಜಿನ ಪ್ರಾಂಶುಪಾಲ‌ ಡಾ. ಪ್ರಹ್ಲಾದ ಚೌಧರಿ ಜಿ ಅವರು ಮಾತನಾಡಿ,  4 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿರುವ ಕಾಲೇಜಿಗೆ ಶಾಸಕರು ಐದು ಕೋಟಿ ರೂ. ಅನುದಾನ ಒದಗಿಸಿದ್ದಾರೆ. ಇನ್ನೂ ಹತ್ತು ಕೋಟಿ ರೂ ಅನುದಾನ ಬರುವ ನಿರೀಕ್ಷೆ ಇದೆ ಎಂದು ಹೇಳಿದರು.

ಸಂಘದ ಸಂಚಾಲಕರೂ ಆಗಿರುವ ಸಹ ಪ್ರಾಧ್ಯಾಪಕ ಉ  ಡಾ. ಗುರುಬಸಪ್ಪ .ಎಸ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ.  ಹಳೇ ವಿದ್ಯಾರ್ಥಿಗಳ ಸಂಘದಿಂದ ನಡೆದಿರುವ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ಇನ್ನೂ ಹೆಚ್ಚಿನ ಕಾರ್ಯಕ್ರಮ ನಡೆಸಲು ಹಳೇ ವಿದ್ಯಾರ್ಥಿಗಳು, ಜನ ಪ್ರತಿನಿಧಿಗಳು ಸಂಘಕ್ಕೆ ಹೆಚ್ಚಿನ‌ನೆರವು ನೀಡಬೇಕು ಎಂದು ಕೋರಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಸಿದ್ದ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ವೆಂಕಟೇಶ್ ಹೆಗಡೆ ಮಾತನಾಡಿ,  ನಮ್ಮ  ಸಂಘವು ಹಲವಾರು ಉದ್ದೇಶಗಳನ್ನು ಇಟ್ಟುಕೊಂಡು ಮುನ್ನಡೆಯುತ್ತಿದೆ. ಇದೇ ಕಾಲೇಜಿನಲ್ಲಿ ಓದುತ್ತಿರುವಂತಹ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಸಹಾಯ ಮತ್ತು ಸಹಕಾರವನ್ನು ನೀಡುವಲ್ಲಿ ಈ ಸಂಘವು ಸದಾ ಸಿದ್ಧವಾಗಿರುತ್ತದೆ ಅಲ್ಲದೆ ವಿದ್ಯಾರ್ಥಿಗಳ ಕುಂದು ಕೊರತೆಗಳನ್ನು ನೀಗಿಸುವಲ್ಲಿ ಮುಂಚೂಣಿಯಲ್ಲಿ ಇರುತ್ತದೆ .
ಸಮಾಜದ ಏಳಿಗೆಗಾಗಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು  ಹಮ್ಮಿಕೊಳ್ಳಲು  ಈ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿಕೊಂಡು ಹೋಗಿರುವ ಮತ್ತು ಹೋಗುತ್ತಿರುವ ಎಲ್ಲ ವಿದ್ಯಾರ್ಥಿಗಳು ಸಂಘ ನಿಗದಿ ಮಾಡಿದಂತಹ ನೋಂದಣಿ ಶುಲ್ಕವನ್ನು ಪಾವತಿಸಿ ಅರ್ಜಿಯನ್ನು ತುಂಬುವುದರೊಂದಿಗೆ ಸದಸ್ಯತ್ವವನ್ನು ಪಡೆದುಕೊಳ್ಳಬೇಕಾಗಿ ವಿನಂತಿಸಿದರು.

ಪ್ರತಿ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಚಿನ್ನದ ಪದಕವನ್ನು ಕೊಡುವುದು ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು ನೀಡುವುದು ವಿದ್ಯಾರ್ಥಿಗಳಿಗೆ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು , ನಮ್ಮ ಕಾಲೇಜಿನಲ್ಲಿ ಓದುವಂತಹ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶವನ್ನು ಕಲ್ಪಿಸಲು ಉದ್ಯೋಗ ಮೇಳಗಳನ್ನು ಹಮ್ಮಿಕೊಳ್ಳುವುದು , ಸ್ನೇಹಕೂಟ, ಸ್ನೇಹ ಸಮ್ಮಿಲನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು , ಗುರು ವಂದನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಇದಲ್ಲದೆ ಸಮಾಜಮುಖಿ ಅಭಿವೃದ್ಧಿಗೆ ಸಹಕಾರಿಯಾಗುವಂತಹ  ರಕ್ತದಾನ ಕ್ಯಾಂಪುಗಳನ್ನು ನಡೆಸುವುದು, ಪರಿಸರ ಉಳವಿಗಾಗಿ ಗಿಡಗಳನ್ನು ನೆಡುವುದು, ಸ್ವಚ್ಛತೆ ಮತ್ತು ಆರೋಗ್ಯದ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ಮಾಹಿತಿ ನೀಡುವುದು, ಆರೋಗ್ಯ ತಪಾಸಣೆ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳುವುದು ಈ ಸಂಘದ ಉದ್ದೇಶವಾಗಿದೆ ಎಂದರು.                                               ವಿದ್ಯಾರ್ಥಿಗಳಿಗೆ ಒಂದು ಕಿವಿ ಮಾತು ಹೇಳಿದ ಹೆಗಡೆ ಅವರು, ನಮ್ಮ ಮಧ್ಯೆ ಶಾಸಕರು ಇದ್ದಾರೆ. ಅವರು ಸಹ ವಿದ್ಯಾರ್ಥಿ ಜೀವನದ  ಹಂತ ದಾಟಿ ಬಂದಿದ್ದಾರೆ. ಯಶಸ್ಸು ಯಾರದ್ದೇ ಸ್ವತ್ತಲ್ಲ. ಅದು ಗಂಭೀರವಾಗಿ ಆಲೋಚಿಸಿ ನೇರ ಗುರಿ ಇಟ್ಟುಕೊಂಡು ಹೋಗುವವರ ಹಿಂದೆ ಬೆನ್ನು ಹತ್ತಿ ತಾನೇ ಬರುತ್ತದೆ. ಇದಕ್ಕೆ ತಾಜಾ ಉದಾಹರಣೆ ನಮ್ಮ ಶಾಸಕರು. ಅವರು ಶ್ರೀಮಂತರಾದರು ಬಡವರ ಸೇವೆ ಮಾಡಲು ರಾಜಕಾರಣಕ್ಕೆ ಬಂದವರು. ಇಂದಿಗೂ ಅತ್ಯಂತ ಸರಳ ಜೀವನವನ್ನು ಅಳವಡಿಸಿ ಕೊಂಡು ಮಾದರಿಯಾಗಿದ್ದಾರೆ ಎಂದು ಗುಣಗಾನ‌ ಮಾಡಿದರು. ಬಳ್ಳಾರಿಯ ಸಮಗ್ರ ಅಭಿವೃದ್ಧಿಗೆ ಕನಸು ಕಂಡವರು. ಅಂತಹ ದಿಟ್ಟ ನಾಯಕರಾಗಲು ನೀವು ಶ್ರಮಿಸಿ. ಯಾರು ಬೇಕಿದ್ದರೂ ಯಾವ ಹಂತಕ್ಕೂ ತಲುಪಬಹುದು. ನಮ್ಮ ಸಂವಿಧಾನ ಅಂತಹ ಅವಕಾಶ ನೀಡಿರುತ್ತದೆ ಎಂದು ಹೇಳಿದರು.
ಹಳೆ ವಿದ್ಯಾರ್ಥಿಗಳ ಸಂಘದ ಪ್ರಧಾನ ಕಾರ್ಯದರ್ಶಿ  ಆರ್.ವೈ. ಹನುಮಂತ ರೆಡ್ಡಿ, ಕಾರ್ಯಾಧ್ಯಕ್ಷ ಎಂ. ಕಿಶೋರ್ ಕುಮಾರ್,  ಖಜಾಂಚಿ  ಎನ್. ವೀರಭದ್ರಗೌಡ, ಚಾನಳ್ ಶೇಖರ್, ಉಪಾಧ್ಯಕ್ಷ ಜಿ.ಆನಂದಕುಮಾರ್ ವೇದಿಕೆ ಮೇಲೆ ಇದ್ದರು.               ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳಾದ ಕಗ್ಗಲ್ ಮಂಜುನಾಥ,ಮಲ್ಲ ರೆಡ್ಡಿ, ಗಂಗಧಾರ, ರಫಿಕ್,ಕೇಶವ, ಶಿವಕುಮಾರ್ ಎಚ್,ಎಸ್. ಮುಂತಾದವರು ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಬಿಂದು ಪ್ರಾರ್ಥಿಸಿದರು. ಉಪನ್ಯಾಸಕರಾದ ಎಂ.ರಫಿ ಸ್ವಾಗತಿಸಿದರು. ರಾಮಸ್ವಾಮಿ  ನಿರೂಪಿಸಿದರು.   ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಅರುಣಾಚಲಂ  ವಂದಿಸಿದರು.