ಅನುದಿನ ಕವನ-೧೭೮೬, ಕವಿ: ಎ.ಎನ್ ರಮೇಶ್, ಗುಬ್ಬಿ, ಕವನದ ಶೀರ್ಷಿಕೆ: ಮರೀಚಿಕೆ

“ಇದು ನಿತ್ಯ ಹಾಲಾಹಲ ನುಂಗಿಯೂ ಹಸನ್ಮುಖಿಯಾಗಿ ನಿಂತವರ ಕವಿತೆ. ಬೆಂಕಿಯುಂಡು ಶೀತಲ ಕಿರಣಗಳ ಚೆಲ್ಲಿ ನಗುವವರ ನಿತ್ಯ ಸತ್ಯ ಭಾವಗೀತೆ. ಇಲ್ಲಿ ಆಳಕ್ಕಿಳಿದಷ್ಟೂ ಬಾಳಯುದ್ದದ ಸಾರವೇ ಅಡಗಿದೆ. ಅರ್ಥೈಸಿದಷ್ಟೂ ಸಾವಿರದ ಸಾವಿರ ಸಾವಿರ ಸತ್ಯ ಸತ್ವ ತತ್ವಗಳ ವಿಸ್ತಾರವೇ ಇದೆ. ಓದಿ ನಿಮಗೆ ಖಂಡಿತಾ ಇಷ್ಟವಾಗುತ್ತದೆ. ಇದು ಯುಗ ಯುಗದ ನಮ್ಮ ನಿಮ್ಮದೇ ಬದುಕುಗಳ ಚಿರ ಚಿರಂತನ ಗೀತೆ. ಏನಂತೀರಾ..?”
-ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.

ಮರೀಚಿಕೆ..!

ಕಂಡು ತುಟಿಗಳಂಚಿನ ನಗೆ ಇಬ್ಬನಿ
ಅಂದುಕೊಳ್ಳದಿರಿ ಇಲ್ಲವೆಂದು ಕಂಬನಿ
ಕಣ್ಣೀರಿದೆ ಕೈತೊಳೆದುಕೊಳ್ಳುವಷ್ಟಲ್ಲ
ನಿತ್ಯವೂ ಮೈ ತೊಳೆದುಕೊಳ್ಳುವಷ್ಟು.!

ಕಂಡು ಕಂಗಳಂಚಿನ ಕೋಲ್ಮಿಂಚು
ಎಣಿಸದಿರಿ ಒಳಗಿಲ್ಲವೆಂದು ಉರಿಗಿಚ್ಚು
ಒಡಲಲಿದೆ ಬೇಗೆ ಮನ ಸುಡುವಷ್ಟಲ್ಲ
ಕಾಳ್ಗಿಚ್ಚಾಗಿ ಇಡೀ ಬದುಕನ್ನೇ ಸುಡುವಷ್ಟು.!

ಕಂಡು ನುಡಿಗಳೊಳಗಿನ ಮಕರಂದ
ಭ್ರಮಿಸದಿರಿ ಎದೆಯಲಿಲ್ಲವೆಂದು ಆಕ್ರಂದ
ಹೃದಯದಲ್ಲಿದೆ ವೇದನೆ ರೋಧಿಸುವಷ್ಟಲ್ಲ
ಕ್ಷಣ-ಕ್ಷಣವೂ ಬಾಳನ್ನೇ ಬಾಧಿಸುವಷ್ಟು.!

ಕಂಡು ನಡೆಯೊಳಗಿನ ಲವಲವಿಕೆ
ತಿಳಿಯದಿರಿ ಹೆಜ್ಜೆಗಳಲಿಲ್ಲವೆಂದು ನರಳಿಕೆ
ನರ-ನರಗಳಲಿದೆ ನೋವು ಕಾಡುವಷ್ಟಲ್ಲ
ಅಡಿಗಡಿಗೂ ಜೀವವನೇ ಹಿಂಡುವಷ್ಟು.!

ಕಂಡು ಪ್ರಶಾಂತ ಮುಗುಳು ಮಾರುತ
ಭಾವಿಸದಿರಿ ಇಲ್ಲವೆಂದು ಭಾವದಲೆ ಮೊರೆತ
ಆಳದಲ್ಲಿದೆ ಚಂಡಮಾರುತ ನಡುಗಿಸುವಷ್ಟಲ್ಲ
ನನ್ನಸ್ತಿತ್ವ ಅಸ್ಮಿತೆಯನ್ನೇ ಮುಳುಗಿಸುವಷ್ಟು.!

ನಕ್ಕಿದ್ದೇನೆಂದರೆ ನೊಂದಿಲ್ಲ ನಲುಗಿಲ್ಲವೆಂದಲ್ಲ
ನಿಂತಿದ್ದೇನೆಂದರೆ ಕನಲಿಲ್ಲ ಕುಸಿದಿಲ್ಲವೆಂದಲ್ಲ
ಸೆಣಸುತ್ತಿದ್ದೇನೆಂದರೆ ಸೋತಿಲ್ಲ ಸತ್ತಿಲ್ಲವೆಂದಲ್ಲ
ಸಾಗಿದ್ದೇನೆಂದರೆ ಬಳಲಿಲ್ಲ ಬಸವಳಿದಿಲ್ಲವೆಂದಲ್ಲ.!

ನಡೆದಿದ್ದೇನೆಂದರೆ ನಾಳೆಗಳ ನಂಬಿಕೆಯಿಂದಲ್ಲ
ಬದುಕುತ್ತಿದ್ದೇನೆಂದರೆ ಬೆಳಕಿನ ಭರವಸೆಯಿಂದಲ್ಲ
ಜೀವ-ಜೀವನದ ಯುದ್ದ ಮುಗಿಸಲೇಬೇಕೆಂದು
ಬದುಕಿಗೆ ಬೆನ್ನೊಡ್ಡಿ ಓಡಿ ಮಣ್ಣಾಗಬಾರದೆಂದು.!

ವಿಧಾತನ ವಿಧಿಲೀಲೆಯ ಆನಂದಿಸಲೇಬೇಕೆಂದು
ಬಾಳಕುಲುಮೆಯ ಬೆಂಕಿ ಅರಗಿಸಿಕೊಳ್ಳಲೇಬೇಕೆಂದು
ಅವನೆದುರು ಎದುರಾಡದೆ ಒಪ್ಪಿಕೊಳ್ಳಲೇಬೇಕೆಂದು
ಎಲ್ಲ ಅವನಿಗರ್ಪಿಸಿ ಅವನನ್ನೆ ಅಪ್ಪಿಕೊಳ್ಳಬೇಕೆಂದು.!

-ಎ.ಎನ್.ರಮೇಶ್, ಗುಬ್ಬಿ.