ಪಾಂಚಾಲಿ
ಅಗ್ನಿಯಿಂದ ಹುಟ್ಟಿದವಳು
ಬಾಳೆಲ್ಲಾ ಧಗಧಗ, ಧಗಧಗ
ಉರಿದವಳು
ದ್ರುಪದ ರಾಜನನಿಗೆ ಮಗಳು, ಜಗದೋದ್ಧಾರನಿಗೆ ತಂಗಿ
ಉಪಪಾಂಡವರಿಗೆ ತಾಯಿ, ಕುಂತಿಗೆ ಸೊಸೆ
ಅಭಿಮನ್ಯುವಿಗೆ ದೊಡ್ಡಮ್ಮ
ಗಂಡಂದಿರ ವಿಷಯ ಬೇಡಬಿಡಿ
ಎಲ್ಲರಿಗೂ ಸೇರಿದವರು ಯಾಕೋ
ಯಾರಿಗೂ ಸೇರಿದವರಾಗುವುದಿಲ್ಲ…
ಪ್ರೀತಿಯಿಂದ, ಪ್ರೀತಿಗಾಗಿ ಹುಟ್ಟಿದವಳಲ್ಲ
ದ್ರುಪದನ ಮಗಳು,
ಗುರಿಯಿಟ್ಟ ಬಾಣದ ಮೊನೆಯಿಂದ ಮೈದಳೆದವಳು.
ಯಾರದೋ ಉದ್ದೇಶಗಳಿಗೆ ಹೆಗಲಾದವಳು
ಬಿಲ್ಲಾಳುಗಳ ಪಣವಾದವಳು, ಅವರ ಅಮ್ಮನಿಗೆ ಬತ್ತಳಿಕೆ ಆದಳು
ಒಡಲಾದಳು, ಮಡಿಲಾದಳು
ಆಗುತ್ತಾ ಆಗುತ್ತಾ ಖಾಲಿಯಾದಳು.
ಒಳಗೆ ಕರೆದ ಅತ್ತೆ ಬೊಗಸೆಗಿಟ್ಟದ್ದು ಐದುಬಾಣಗಳನ್ನು
ಭರಿಸಿದ್ದಾಳೆ ಅಂದಿನಿಂದ ಇಂದಿಗೂ
ಉಸಿರೆತ್ತದಂತೆ, ಮುಷ್ಟಿ ಸಡಲಿಸದಂತೆ
ಹಂಚಿದ್ದಾಳೆ ಅಟ್ಟಿದ ಅಡಿಗೆಯನ್ನು, ಹೊತ್ತ ಒಡಲನ್ನು
ಪಂಚಬಾಣಗಳ ಗುರಿ ಏಕವಾಗಿರುವಂತೆ.
ಎಣಿಸೆಣಿಸಿ ಮುತ್ತುಕೊಡುವುದು, ಎಣಿಸೆಣಿಸಿ ಹಾಸಿಗೆ ಹಾಸುವುದು
ಜೀವದುದ್ದಕ್ಕೂ ಉರಿದಳು ಪಾಂಚಾಲಿ ಪಂಚಾಗ್ನಿ ನಡುವೆ.
ಸವ್ಯಸಾಚಿಯ ತೋಳುಗಳಲ್ಲಿ ಸಿರಿಮುಡಿಗೆ ಎಡೆಯಿಲ್ಲ
ಅರ್ಜುನನ ದಿಟ್ಟಿ ನೆಡುವುದು ಹಕ್ಕಿಯ ಕಣ್ಣುಗಳಿಗೆ
ಹಕ್ಕಿಯ ಹೃದಯ ನೆಟ್ಟಬಾಣಕ್ಕೆ ಕುರುಡು.
ಇನ್ನು ಅವನೋ ಹಗಲಿರುಳೂ ಧರ್ಮವನ್ನೇ ಧೇನಿಸುತ್ತಾನೆ
ಸಮಯ ಸಿಕ್ಕಾಗ, ಪಕ್ಕದಲ್ಲಿದ್ದರೆ ಕರೆಯುತ್ತಾನೆ
ಇಲ್ಲವೆಂದರೆ ನಿರಾಳ ಮಲಗುತ್ತಾನೆ
ಅಹಂ ದಾಟಬಹುದು,
ಸುಲಭವಲ್ಲ ಉದಾಸೀನದ ಅಗ್ನಿರೇಖೆ.
ಅವಳಿಗಳಿಗೆ ಮಡದಿಯೂ ಮೂರನೆಯವಳು.
ಮಹಾಪ್ರಸ್ಥಾನಕ್ಕೆ ಹೊರಟವರು ಹಿಂದಿರುಗಿ ನೋಡಲಾರರು.
ಅತ್ತೆ ಕೊಟ್ಟ ಬಾಣಗಳು
ಕಾಯುತ್ತಾವೆಂಬ ಭ್ರಮೆ ಕಳಚಿದ ಕ್ಷಣ
ದ್ರೌಪದಿ
ಪಂಚಬಾಣಗಳ ಬಿಲ್ಲು ಮಾತ್ರವಾಗುಳಿದಳು.
ಜಗದೊಡನೆ ಇವರಿಗಾಗಿ ಕಾದುತ್ತಾಳೆ,
ಕದವೆಳೆದ ಮೇಲೆ ಇವರೊಡನೆ ಕಾದುತ್ತಾಳೆ.
ಸೂರ್ಯ ಕಂದುತ್ತಿದ್ದಾನೆ
ಕಂಡಾಗೆಲ್ಲಾ ಉರಿದೇ ಉರಿಯುತ್ತಾನೆ
ಯಾವ ಸಿಟ್ಟಿಗೆ ಹೀಗೆ ಕುದಿಯುತ್ತಾನೆ?
ಮುಡಿಬಿಚ್ಚಿದ ದ್ರುಪದನಂದಿನಿಯ
ಸಿರಿಮುಡಿಯಲ್ಲಿ ಈಗ ಮೊದಲಿನ ನಯವೂ ಇಲ್ಲ, ನಯಗಾರಿಕೆಯೂ ಇಲ್ಲ
ಅಗ್ನಿಕನ್ಯೆಗೂ ವಯಸ್ಸಾಗುತ್ತದೆ
ದಣಿವಾಗುತ್ತದೆ…
ಭೀಮ, ಶಾಸ್ತ್ರ ಬಲ್ಲವನಲ್ಲ, ವ್ಯೂಹ ಬಲ್ಲವನಲ್ಲ,
ಪ್ರೀತಿ ಮಾತು ಬಿಡಿ
ಹೆಚ್ಚು ಮಾತು ಬಲ್ಲವನೂ ಅಲ್ಲ.
ಮಾತಿಲ್ಲದೆ ಕಾಲಡಿಯ ಮುಳ್ಳು ತೆಗೆಯುತ್ತಾನೆ
ನೆರಳಾಗುವಂತೆ ಪಕ್ಕ ನಿಲ್ಲುತ್ತಾನೆ,
ದ್ರೌಪದಿಯ ನಿಟ್ಟುಸಿರಿಗೆ ಕಟ್ಟಿಹಾಕಿದ ಸಿಂಹವಾಗುತ್ತಾನೆ
ಅವಳ ಬಿರುಮುಡಿ ಕಂಡಾಗಲೆಲ್ಲಾ ತಲೆತಗ್ಗಿಸಿ,
ಮುಷ್ಟಿಬಿಗಿಯುತ್ತಾನೆ… ಬೆರಳಮೂಳೆಗಳೆಲ್ಲಾ ಅವನನ್ನು ಪ್ರಶ್ನೆಕೇಳುತ್ತವೆ.
ಧರ್ಮನನ್ನು ಕಾಯುತ್ತಾ,
ಪಲ್ಗುಣನಿಗಾಗಿ ಕಾಯುತ್ತಾ,
ದ್ರೌಪದಿ ಯಾವಾಗಲೋ ಭೀಮೆಯಾಗಿ ಬಿಟ್ಟಿದ್ದಾಳೆ..
ಮಾಗುವುದೆಂದರೆ ಗಂಡು ಭೀಮನಾಗುವುದು
ಹೆಣ್ಣು ಭೀಮನನ್ನು ಅರಿಯುವುದು.

-ಎನ್.ಸಂಧ್ಯಾರಾಣಿ, ಬೆಂಗಳೂರು
