ಮುಖ
ಬೆಳಗೆದ್ದು ಕನ್ನಡಿಯ ಎದುರು ನಿಂತರೆ
ಏನೂ ಕಾಣಿಸಲಿಲ್ಲ!
ಧೂಳು ಕೂತಿರಬಹುದು ಅಂತ
ಬಟ್ಟೆಯ ತಂದು ಜೋರಾಗಿ ಉಜ್ಜಿದೆ.
ಈಗ ಕಾಣಿಸತೊಡಗಿತು ಅದರಲ್ಲಿ
ಅರೆ,ಅರೆ!-
ಮನೆ ಮಂದಿಯ ಮುಖ
ಗೆಳೆಯರ ಗೆಳತಿಯರ ಮುಖ
ವಿರೋಧಿಗಳ ಮುಖ
ಹಿಂದಿದ್ದು ಮರೆತವರ ಮುಖ
ಮುಸುಕು ತೊಟ್ಟಿರುವ ಮುಖ
ಅಪರಿಚಿತ ಮುಖ
ಎಲ್ಲೋ ಕಂಡ ಮುಖ
ಮಿಂಚೆ ಮಾಯವಾದ ಮುಖ
ಒಂದರ ಹಿಂದೆ ಒಂದು ಮುಖ…..
ಹೀಗೆ ಯಾರ್ಯಾರದೋ ಮುಖ ಕಾಣಿಸಿ
ಒಂದಾದಮೇಲೊಂದರಂತೆ
ಚಲಿಸುತ್ತಾ ಹೋದ ಮುಖ
ಇದು ಯಾರ ಮುಖ ?
ಮುಖವೇ ಅಥವಾ
ಮುಖವಾಡಗಳ ಸಾಲು ಮೆರವಣಿಗೆಯೇ?
ಇಷ್ಟಕ್ಕೂ ನನ್ನ ಮುಖವೆಲ್ಲಿ?
ಅರೆ!
ಇವೆಲ್ಲವೂ ನನ್ನ ಮುಖಗಳೇ?
ಅಥವಾ
ನಿಮ್ಮ ಮುಖಗಳೇ?

-ಸುಬ್ರಾಯ ಚೊಕ್ಕಾಡಿ, ಸುಳ್ಯ
