
ಬಳ್ಳಾರಿ: ಬ್ಯಾನರ್ ತೆರವು ಹಿನ್ನಲೆಯಲ್ಲಿ ನಗರದಲ್ಲಿ ಗುರುವಾರ ಸಂಭವಿಸಿದ ಘಟನೆಯನ್ನು ಅಧ್ಯಯನ ಮಾಡಲು ಬಳ್ಳಾರಿಗೆ ಬಂದಿದ್ದ ಕಾಂಗ್ರೆಸ್ ಪಕ್ಷದ ಮುಖಂಡರ ‘ಸತ್ಯ ಶೋಧನಾ ಸಮಿತಿ…… ಅಲ್ಲ, ಇದು ಸತ್ಯ ಮುಚ್ಚಿಡುವ ಸಮಿತಿ’ ಎಂದು ವಿಧಾನ ಪರಿಷತ್ತಿನ ಪ್ರತಿ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರು ವ್ಯಂಗವಾಡಿದರು.
ಅವರು ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ಘಟನೆಯನ್ನು ಗಮನಿಸಿದರೆ ಸರಕಾರದ ವೈಫಲ್ಯ ಎದ್ದುಕಾಣುತ್ತಿದ್ದು, ಇದರ ಹೊಣೆಯನ್ನು ಸರಕಾರವೇ ಹೋರಬೇಕು ಎಂದರು.
ಸಿನಿಮಾಗಳಲ್ಲಿ ಮಾತ್ರ ನೋಡುತ್ತಿದ್ದ ದೃಶ್ಯಗಳನ್ನು ಬಳ್ಳಾರಿಯಲ್ಲಿ ಜನತೆ ನೇರಾನೇರ ನೋಡಿದ್ದಾರೆ. ಘಟನೆಗೆ ಕಾರಣರಾದ ಶಾಸಕರ ನ್ನು ಮೊದಲು ಬಂಧಿಸಬೇಕು ಎಂದು ನಾರಾಯಣಸ್ವಾಮಿ ಒತ್ತಾಯಿಸಿದರು.
ನಮ್ಮ ಪಕ್ಷ, ನಾಯಕರು ಎಂಎಲ್ಎ ಬಂಧಿಸಿ ಎಂದರೆ ಗನ್ ಮ್ಯಾನ್ ಗಳನ್ನು ಬಂಧಿಸಿದ್ದಾರೆ ಎಂದು ಆಕ್ಷೇಪಿಸಿದರು.
ಬಂದೂಕುಗಳು ಮತ್ತು ಗುಂಡುಗಳು ನಿಮ್ಮವು. ಗುಂಡು ಹಾರಿಸಿದವರು ನಿಮ್ಮವರು; ಸತ್ತವರೂ ನಿಮ್ಮವರು ಆದರೆ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ವಿರುದ್ಧ ಪ್ರಕರಣ ದಾಖಲಿಸುವುದು ನ್ಯಾಯವೇ? ಎಂದು ಪ್ರಶ್ನಿಸಿದರು.
ರಾಜ್ಯ ಗೃಹ ಸಚಿವರು ಅರೆಕಾಲಿಕ ಸಚಿವರಾಗಿದ್ದಾರೆ. ಪೂರ್ಣಾವಧಿ ಸಚಿವರಾಗಿದ್ದರೆ ಬಳ್ಳಾರಿಗೆ ಬಂದು ಪರಿಸ್ಥಿತಿ ಅವಲೋಕಿಸುತ್ತಿದ್ದರು ಎಂದು ತಿಳಿಸಿದರು.
ಡಿವೈಎಸ್ಪಿ ನಂದಾರೆಡ್ಡಿ ಅವರನ್ನು ಅಮಾನತುಗೊಳಿಸಿ ವಿಚಾರಣೆ ನಡೆಸಿ ಎಂದು ಒತ್ತಾಯಿಸಿದರು.
ಸರ್ಕಾರ ಗುಂಡು ಹಾರಿಸಿದ ಅಂಗರಕ್ಷಕರನ್ನು ಮಾತ್ರವಲ್ಲ ಅವರನ್ನು ನೇಮಿಸಿಕೊಂಡವರನ್ನು ಬಂಧಿಸಬೇಕಿತ್ತು. ಬದಲಾಗಿ, ಬಂದೂಕುಗಳನ್ನು ಬಂಧಿಸಲಾಗಿದೆ! ಗುಂಡು ನಿಮ್ಮದು, ಬಂದೂಕು ನಿಮ್ಮದು, ಜನರು ನಿಮ್ಮವರು, ಸತ್ತ ಕಾರ್ಯಕರ್ತ ಕಾಂಗ್ರೆಸ್ಸಿಗ. ಆದರೆ ಎಫ್‌ಐಆರ್ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ವಿರುದ್ಧ ಮಾತ್ರವೇ ಎಂದು ಅವರು ಸರ್ಕಾರವನ್ನು ಪ್ರಶ್ನಿಸಿದರು. ನಮ್ಮನ್ನು ನಾಟಕ ಕಂಪನಿ ಎಂದು ಕರೆಯುವ ಡಿಸಿಎಂ ಡಿ.ಕೆ. ಶಿವಕುಮಾರ್, ದೇಶದಲ್ಲಿ ಕಾಂಗ್ರೆಸ್ ಗಿಂತ ದೊಡ್ಡ ನಾಟಕ ಕಂಪನಿ ಇನ್ನೊಂದಿದೆಯೇ ಎಂದು ಹೇಳಬೇಕು. ಡಿ.ಕೆ. ಶಿವಕುಮಾರ್ ಅವರೇ ಆ ನಾಟಕ ಕಂಪನಿಯ ಮಾಲೀಕರು ಎಂದು ನಾರಾಯಣ ಸ್ವಾಮಿ ವಾಗ್ದಾಳಿ ನಡೆಸಿದರು.
ಒಬ್ಬ ಶಾಸಕರು ಮನೆ ಸುಟ್ಟು ಹಾಕುತ್ತೇನೆ, ಜನಾರ್ದನ ರೆಡ್ಡಿಯನ್ನು ಮುಗಿಸುತ್ತೇನೆ, ತಾಳ್ಮೆ ಕಳೆದುಕೊಂಡರೆ ಬಳ್ಳಾರಿಯನ್ನು ಸುಟ್ಟು ಹಾಕುತ್ತೇನೆ ಎಂದು ಹೇಳಿದರೆ, ಅವರ ಸ್ಥಾನಕ್ಕೆ ಏನಾದರೂ ಬೆಲೆ ಇದೆಯೇ, ಕಾಂಗ್ರೆಸ್ ಆ ಶಾಸಕನನ್ನು ಏಕೆ ಅಮಾನತುಗೊಳಿಸಿಲ್ಲ ಎಂದು ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ವಿಧಾನ ಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಮಾಜಿ ಸಚಿವರಾದ ಬಿ. ಶ್ರೀರಾಮುಲು ಜಿ.ಜನಾರ್ದನ ರೆಡ್ಡಿ, ಮಾಜಿ ಸಂಸದ ಸಣ್ಣ ಪಕ್ಕೀರಪ್ಪ, ಮಾಜಿ ಶಾಸಕರಾದ ಜಿ. ಸೋಮಶೇಖರ ರೆಡ್ಡಿ, ಎಂ. ಎಸ್. ಸೋಮಲಿಂಗಪ್ಪ, ಟಿ. ಎಚ್. ಸುರೇಶ್ ಬಾಬು, ಬಿಜೆಪಿಜಿಲ್ಲಾಧ್ಯಕ್ಷ ಅನಿಲ್ ನಾಯ್ಡು ಮತ್ತಿತರರು ಉಪಸ್ಥಿತರಿದ್ದರು.
