ಅಂಬೇಡ್ಕರ್ ಎಂಬ ಹೆಸರು….

ಎದೆ ದುಃಖವನೆಲ್ಲ ಕಳೆದ
ಅಂಬೇಡ್ಕರ್ ಎಂಬ ಹೆಸರು
ಭಾರತದ ಉಸಿರು
ಬಡಬಗ್ಗರ ನೆರಳು…
ಬಿಕ್ಕಳಿಸಿ ಹೆಪ್ಪುಗಟ್ಟಿದ ನೋವ ಎದೆಯಲ್ಲಿಟ್ಟು
ಮುಟ್ಟಿಸಿಕೊಳ್ಳದೆ ಶೋಷಣೆಗೆ ಒಳಪಟ್ಟು
ಕುದಿಕುದಿವ ರಕ್ತವ ತಣ್ಣಗಾಗಿಸಿ
ಸೋತು ಹೋದವರ ಮೇಲೆತ್ತಿ
ತೋರುಬೆರಳ ತೋರಿ ಸ್ವಾಭಿಮಾನದ ಬದುಕ ಕೊಟ್ಟ
ಅಂಬೇಡ್ಕರ್ ಎಂಬ ಹೆಸರು ಈ ಜನರ ಉಸಿರು…
ಬಿಗಿದ ರೆಪ್ಪೆಗಳ ನಡುವೆ ಜಾರುವ ಹನಿಗಳು
ಸಾವಿನಾಚೆಗೂ ಸತ್ತು ಬದುಕಿ
ನೀರಿಲ್ಲದೆ ನೆರಳಿಲ್ಲದೆ
ಅಸ್ಪೃಶ್ಯನೆಂಬ ಹಣೆಪಟ್ಟಿ ಕಟ್ಟಿ
ಊರ ಹೊರಗೆ ಜೋಪಡಿ ಇಲ್ಲದೆ ಬದುಕಿದ್ದವರ ಜೋಪಡಿ
ಅಂಬೇಡ್ಕರ್ ಎಂಬ ಹೆಸರು ಈ ಜನರ ಉಸಿರು…
ಕುಗ್ಗಿಸಿದವರ ಹಂಗಿಸಿದವರ
ನೀರು ಕೊಡದವರ ಮುಟ್ಟಿಸಿಕೊಳ್ಳದವರ
ಮೈಯ ಸುಲಿದು ದುಡಿಸಿಕೊಂಡವರ
ಕೀಳೆಂದು ದೂರವಿಟ್ಟವರ ಎದುರು
ತಲೆ ಎತ್ತಿ ನಡೆವುದ ಕಲಿಸಿದ
ಅಂಬೇಡ್ಕರ್ ಎಂಬ ಹೆಸರು ಈ ಜನರ ಉಸಿರು…

-ಸಿದ್ದು ಜನ್ನೂರ್, ಚಾಮರಾಜನಗರ
