ಡಾ. ಬರಗೂರು ರಾಮಚಂದ್ರಪ್ಪ ಅವರ ‘ಸೌಹಾರ್ದ ಭಾರತ’ ಕೃತಿ ಲೋಕಾರ್ಪಣೆ: ದೇಶದಲ್ಲಿ ಸೌಹಾರ್ದ ಕೆಡಿಸುವ ಯತ್ನ–ಎಚ್ಚರಿಕೆ ಅಗತ್ಯ -ಡಾ. ಕುಂ.ವೀ

 

ಹೊಸಪೇಟೆ, ಜ.10: ದೇಶದಲ್ಲಿ ಕಳೆದ 11 ವರ್ಷಗಳಿಂದ ಸೌಹಾರ್ದ ಕೆಡಿಸುವ ಯತ್ನ ನಡೆಯುತ್ತಿದೆ. ಧರ್ಮ ಧರ್ಮಗಳ ನಡುವೆ ದ್ವೇಷ ಬಿತ್ತಿ, ಅದನ್ನು ಲಾಭಕ್ಕೆ ಬಳಸಿಕೊಳ್ಳುವ ಯತ್ನವೂ ನಿರಂತರ ಸಾಗಿದೆ. ಇದರ ಬಗ್ಗೆ ಜನ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಹಿರಿಯ ಸಾಹಿತಿ ಡಾ. ಕುಂ.ವೀರಭದ್ರಪ್ಪ (ಕುಂ.ವೀ) ಹೇಳಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಶನಿವಾರ ಸೌಹಾರ್ದ ಕರ್ನಾಟಕ ಹೊಸಪೇಟೆ ಮತ್ತು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಬರಗೂರು ರಾಮಚಂದ್ರಪ್ಪ ಅವರ ‘ಸೌಹಾರ್ದ ಭಾರತ ಸಮಾನತೆಯ ಸ್ನೇಹಿತ..’ ಕೃತಿಯನ್ನು ಜನಾರ್ಪಣೆಗೊಳಿಸಿ ಅವರು ಮಾತನಾಡಿದರು.
ವಿವಿಧ ಜನಾಂಗ, ಸಮುದಾಯಗಳ ನಡುವೆ ದ್ವೇಷ ಬಿತ್ತುವ ಕೆಲಸ ಜಗತ್ತಿನಲ್ಲಿ ಆರಂಭವಾದುದು 1914ರ ಸಮಯದಲ್ಲಿ. ಜರ್ಮನಿಯಲ್ಲಿ ಯಹೂದಿಗಳನ್ನು ವಿನಾ ಕಾರಣ ನಿಂದಿಸುವ, ಶಿಕ್ಷಿಸುವ ಕೆಲಸ ನಡೆಯಿತು. ಅದೇ ವಾತಾವರಣ ನಮ್ಮ ದೇಶದಲ್ಲಿ ಕಳೆದ 11 ವರ್ಷಗಳಿಂದ ನಡೆಯುತ್ತಿದೆ. ಮುಸ್ಲಿಮವರನ್ನು ವಿನಾ ಕಾರಣ ದ್ವೇಷಿಸುವ ವಾತಾವರಣ ನಿರ್ಮಿಸಲಾಗಿದೆ ಎಂದು ಕುಂ.ವೀ ಆತಂಕ‌ ವ್ಯಕ್ತಪಡಿಸಿದರು.
ಇಲ್ಲಿನವರಿಂದಲೇ ಕೊಳ್ಳೆ:   ‘ವಿಜಯನಗರ ಇತಿಹಾಸವನ್ನೇ ಅವಲೋಕಿಸಿದರೆ, ಇಲ್ಲಿ ಸಹ ಮುಸ್ಲಿಮರಿಂದ ವಿಜಯನಗರ ಸಾಮ್ರಾಜ್ಯ ಕೊಳ್ಳೆ ಹೊಡೆಯಲ್ಪಟ್ಟಿತು ಎಂದೇ ಬಿಂಬಿಸಲಾಗಿದೆ. ವಾಸ್ತವವಾಗಿ ವಿಜಯನಗರದ ಕೊನೆಯ ದೊರೆ ರಾಮರಾಯ ಯುದ್ಧದಲ್ಲಿ ಸೋತದ್ದು ಬಹಳ ದೂರದಲ್ಲಿ, ಆದರೆ ತಕ್ಷಣ ಹಂಪಿ ಭಾಗದಲ್ಲಿ ಕೊಳ್ಳೆ ಹೊಡೆಯುವ ಕೆಲಸ ನಡೆಯಿತು. ಇದನ್ನು ಯಾರು ಮಾಡಿದ್ದು ಎಂದು ಊಹಿಸುವುದು ಕಷ್ವವಲ್ಲ, ಇಲ್ಲಿ ಇದ್ದ ಹಿಂದೂಗಳೇ ರಾಜರ ಮೇಲಿನ ದ್ವೇಷದಿಂದ ಸಾಮ್ರಾಜ್ಯವನ್ನು ಕೊಳ್ಳೆ ಹೊಡೆದರು’ ಎಂದು ಕುಂ.ವೀರಭದ್ರಪ್ಪ ಅಭಿಪ್ರಾಯಪಟ್ಟರು.

ವಿಜಯನಗದ ಇತಿಹಾಸ ಗಮನಿಸಿದರೆ ಇಲ್ಲಿ ರಚನೆಯಾದ ಸಾಹಿತ್ಯಗಳಲ್ಲಿ ರಾಜರನ್ನು ಹೊಗಳುವ, ಅವರ ಸಾಧನೆ ತಿಳಿಸುವ ಅಂಶ ಕಾಣಿಸುವುದಿಲ್ಲ, ಬದಲಿಗೆ ಇಲ್ಲಿನ ಜಾನಪದ ಸಾಹಿತ್ಯಗಳಲ್ಲಿ ಕುಮಾರರಾಮ, ಪಾಳೆಗಾರರು, ಜನಸಾಮಾನ್ಯರನ್ನು ಹೊಗಳುವ ಪರಿಪಾಠ ಕಾಣಿಸುತ್ತದೆ. ರಾಜರಿಂದ ಜನರಿಗೆ, ಜನಸಾಮಾನ್ಯರಿಗೆ ನೆಮ್ಮದಿ ಇರಲಲ್ಲ ಎಂಬುದನ್ನು ಇದು ಸೂಚಿಸುತ್ತದೆ, ಇದರ ಫಲವಾಗಿಯೇ ರಾಜ್ಯ ಪತನವಾದಾಗ ಕೊಳ್ಳೆ ಹೊಡೆದು ಸೇಡು ತೀರಿಸಿಕೊಳ್ಳುವ ಕೆಲಸ ಇಲ್ಲಿ ನಡೆದಂತೆ ಕಾಣಿಸುತ್ತದೆ ಎಂದು ಅವರು ವಿವರಿಸಿದರು.
ಸಾಹಿತ್ಯದ ಮೂಲವೇ ಸೌಹಾರ್ದ: ಸೌಹಾರ್ದತೆ ಎಂಬುದು ಈ ದೇಶದ ಮೂಲಭೂತ ಗುಣ. ಹಲವು ಹಳಗನ್ನಡ, ನಡುಗನ್ನಡ ಸಾಹಿತ್ಯ ಕೃತಿಗಳಲ್ಲಿ ಇದನ್ನೇ ಪ್ರಧಾನವಾಗಿ ಪರಿಗಣಿಸಲಾಗಿದೆ.  ವಚನ ಸಾಹಿತ್ಯದ ಆಶಯವೂ ಇದೇ ಆಗಿದೆ. ಇನ್ನೊಂದು ಧರ್ಮವನ್ನು, ವಿಚಾರಗಳನ್ನು ಗೌರವಿಸು ಎಂದೇ ಎಲ್ಲಾ ದಾರ್ಶನಿಕರೂ, ಸಾಹಿತಿಗಳೂ ಹೇಳಿದ್ದಾರೆ. ಆದರೆ ನಾವು ಈ ಮೂಲ ತತ್ವವನ್ನೂ ಕಳೆದ 11 ವರ್ಷಗಳಿಂದ ಮರೆತಂತೆ ವರ್ತಿಸುತ್ತಿದ್ದೇವೆ ಎಂದು ಕುಂ.ವೀ ವಿಷಾದ ವ್ಯಕ್ತಪಡಿಸಿದರು.

ದೇಶದ 700 ವರ್ಷದ ಇತಿಹಾಸದಲ್ಲಿ ಸುಮಾರು 300 ವರ್ಷಗಳಷ್ಟು ಅವಧಿಯನ್ನು ಅನಕ್ಷರಸ್ಥ ಮುಸ್ಲಿಂ ದೊರೆಗಳೇ ಆಳಿದ್ದಾರೆ. ಆದರೆ ಮತಾಂತರ, ಧರ್ಮದ್ವೇಷದಂತಹ ಉದಾಹರಣೆಗಳು ಹೆಚ್ಚೇನೂ ಸಿಗುವುದಿಲ್ಲ. ಹಿಂದೂಗಳಲ್ಲೇ ಹಲವು ಪಂಗಡಗಳು ಬಲಾತ್ಕಾರದಿಂದ ಮತಾಂತರ ಮಾಡಿಸಿಕೊಂಡ ನಿದರ್ಶನವೂ ಇದೆ. ಹೀಗಾಗಿ ಒಂದು ನಿರ್ದಿಷ್ಟ ಧರ್ಮವನ್ನೇ ಗುರಿಯಾಗಿಸಿ ಅವರಿಂದಲೇ ಎಲ್ಲವೂ ನಡೆಯುತ್ತಿದೆ ಎಂದು ಹೇಳುವುದು ಸರಿಯಲ್ಲ ಎಂದರು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಹಳಷ್ಟು ಮುಸ್ಲಿಮರು ಬಲಿದಾನ ಮಾಡಿದ್ದಾರೆ ಎಂದ ಅವರು, ತಾವು ದೇಶಪ್ರೇಮಿಗಳು ಎಂದು ಹೇಳಿಕೊಳ್ಳುವ ಸಂಘಟನೆಯವರು ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡೇ ಇಲ್ಲ ಎಂದರು.


ಕಲಿತವರಿಂದಲೇ ತೊಂದರೆ: ‘ಸೌಹಾರ್ದ ಭಾರತ’ ಕೃತಿಯ ಕುರಿತು ಮಾತನಾಡಿದ ನಿವೃತ್ತ ಪ್ರಾಧ್ಯಾಪಕ ಪ್ರೊ.ಅಮರೇಶ ನುಗಡೋಣಿ, ಇಂದು ದೇಶದಲ್ಲಿ ವಿದ್ಯೆ ಕಲಿತವರಿಂದಲೇ ಅಧಿಕ ಅಪಾಯ ಎದುರಾಗಿದೆ ಎಂದರು.

ಕನ್ನಡ ಸಾಹಿತ್ಯದಲ್ಲಿ ಸೌಹಾರ್ದತೆ ಬಿಟ್ಟರೆ ಇನ್ನೊಂದು ಮಾತಿಲ್ಲ. ಕೂಡಿ ಬಾಳಬೇಕು ಎಂದೇ ಎಲ್ಲರೂ ಹೇಳಿದ್ದಾರೆ. ಪಂಪನಿಂದ ಹಿಡಿದು ವಚನಕಾರರು, ಕುವೆಂಪು ತನಕ ಎಲ್ಲರದೂ ಇದೇ ಆಶಯವಾಗಿದೆ. ಅಕ್ಷರ ಕಲಿತರವಿಗೆ ಇದನ್ನು ಮತ್ತೆ ತಿಳಿಹೇಳುವ ಅಗತ್ಯ ಎದುರಾಗಿದೆ ಎಂದು ಅವರು ಹೇಳಿದರು.
ಗಾಂಧಿ, ವಿವೇಕಾನಂದರ ಹಲವು ವಿಚಾರಗಳನ್ನು ಎತ್ತಿಕೊಂಡ ಬರಗೂರು ಅವರು ತಮ್ಮ ಕೃತಿಯಲ್ಲಿ ಸೌಹಾರ್ದತೆಯ ಅಗತ್ಯವನ್ನು ತಿಳಿಸಿದ್ದಾರೆ, ಈ ಕೃತಿಯನ್ನು ಶಾಲಾ, ಕಾಲೇಜುಗಳಲ್ಲಿ ಹಂಚಿ, ಯುವಜನಾಂಗದವರಿಗೆ ಸೌಹಾರ್ದದ ಬಗ್ಗೆ ಮನವರಿಕೆ ಮಾಡುವ ಅಗತ್ಯ ಇದೆ ಎಂದರು.
ದ್ವೇಷ ಸರಿಯಲ್ಲ: ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎನ್.ಎಫ್.ಮೊಹಮ್ಮದ್ ಇಮಾಂ ನಿಯಾಜಿ ಮಾತನಾಡಿ, ಧರ್ಮಗಳ ಸಾರ ಕೂಡಿ ಬಾಳುವುದೇ ಹೊರತು ದ್ವೇಷ ಸಾಧಿಸುವುದಲ್ಲ, ಆದರೆ ಇಂದು ಕಾಲೇಜುಗಳಲ್ಲಿ ಸಹ ವಿದ್ಯಾರ್ಥಿಗಳಲ್ಲಿ ಗುಂಪುಗಳು ರಚನೆಗೊಂಡು ದ್ವೇಷದ ವಾತಾವರಣ ಸೃಷ್ಟಿಯಾಗುತ್ತಿದೆ ಎಂದರು.


ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪಿ.ಸತ್ಯನಾರಾಯಣ ಮಾತನಾಡಿ, ಜಿಲ್ಲೆಯಲ್ಲಿ ಪತ್ರಕರ್ತರಿಗೆ ಹಲವು ಸಂಘಟನೆಗಳ ಜತೆಗೆ ಸೌಹಾರ್ದತೆ ಇರುವ ಕಾರಣಕ್ಕೆ ಇಂತಹ ಕಾರ್ಯಕ್ರಮ ಸಂಘಟಿಸುವುದು ಸಾಧ್ಯವಾಯಿತು ಎಂದರು.
ರಂಗ ಕಲಾವಿದೆ ನಾಗರತ್ನಮ್ಮ, ವಕೀಲ ಗುಜ್ಜಲ್ ನಾಗರಾಜ ಮಾತನಾಡಿದರು. ಸೌಹಾರ್ದ ಕರ್ನಾಟಕದ ಜಿಲ್ಲಾ ಸಂಚಾಲಕ ಎ.ಕರುಣಾನಿಧಿ ಅವರು ಪ್ರಸ್ತಾವಿಕವಾಗಿ ಮಾತನಾಡಿ, ರಾಜ್ಯದ 23 ಜಿಲ್ಲೆಗಳಲ್ಲಿ ‘ಸೌಹಾರ್ದ ಭಾರತ’ ಕೃತಿ ಜನಾರ್ಪಣೆ ಏಕಕಾಲದಲ್ಲಿ ನಡೆದಿದೆ ಎಂದರು.

ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಭಾಜನರಾದ ಸಂಯುಕ್ತ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರರಾದ ಕೆ.‌ಲಕ್ಷ್ಮಣ ಅವರನ್ನು ಜ.10 ರಂದು ಹೊಸಪೇಟೆಯಲ್ಲಿ ಡಾ.‌ಬರಗೂರು ಅವರ ಸೌಹಾರ್ದ ಕರ್ನಾಟಕ ಕೃತಿ‌ ಬಿಡುಗಡೆ ಸಮಾರಂಭದಲ್ಲಿ ಗಣ್ಯರು ಸನ್ಮಾನಿಸಿ ಗೌರವಿಸಿದರು. ಡಾ. ಕುಂವೀ, ಡಾ.‌ಅಮರೇಶ‌ ನುಗಡೋಣಿ, ವಿಜಯನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕೆ.ಲಕ್ಷ್ಮಣ್‌ಗೆ ಸನ್ಮಾನ: ಮಾಧ್ಯಮ ಪ್ರಶಸ್ತಿಗೆ ಪಾತ್ರರಾಗಿರುವ ನಗರದ ಹಿರಿಯ ಪತ್ರಕರ್ತ, ‘ಸಂಯುಕ್ತ ಕರ್ನಾಟಕ’ದ ಜಿಲ್ಲಾ ವರದಿಗಾರ ಕೆ.ಲಕ್ಷ್ಮಣ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸಂಘದ ರಾಜ್ಯ ಸಮಿತಿ ಸದಸ್ಯ ಪಿ.ವೆಂಕೋಬ ನಾಯಕ, ಡಿಎಚ್‌ಎಸ್‌ ಮುಖಂಡ ಎಂ.ಜಂಬಯ್ಯ ನಾಯಕ, ಸಂಘದ ಉಪಾಧ್ಯಕ್ಷ ಸಿ.ಕೆ.ನಾಗರಾಜ, ಕಾರ್ಯದರ್ಶಿಗಳಾದ ಸುರೇಶ್ ಚವ್ಹಾಣ್ ಇತರರು ಇದ್ದರು. ಬಿ.ಮಹೇಶ್ ನಿರೂಪಿಸಿದರು. ಉಮಾಮಹೇಶ್ವರ ವಂದಿಸಿದರು.