ಅನುದಿನ ಕವನ-೧೮೩೯, ಕವಿ: ಎ. ಎನ್. ರಮೇಶ್, ಗುಬ್ಬಿ, ಕವನದ ಶೀರ್ಷಿಕೆ:ಡೋಂಟ್ವರಿ ರೀ..!

“ಇದು ನಾವು ನೀವು ನಿತ್ಯ ಪಾಲಿಸಲೇಬೇಕಾದ ಬಾಳತತ್ವಗಳ ಮಾರ್ಮಿಕ ಕವಿತೆ. ಬದುಕಿನ ಕಟು ವಾಸ್ತವಗಳ ನಿವೇದಿಸುವ ಸತ್ಯ ಸಂವೇದನೆಗಳ ಸಾತ್ವಿಕ ಭಾವಗೀತೆ. ಬೇಡದಕ್ಕೆಲ್ಲ ವೃಥಾ ವರಿ ಮಾಡ್ಕೊಂಡು ಒದ್ದಾಡುವುದೇಕೆ.? ಭ್ರಮೆ-ಭ್ರಾಂತುಗಳ ಬಿಟ್ಟು ಕಹಿಸತ್ಯಗಳನ್ನು ಅರಗಿಸಿಕೊಂಡು ಸಿಹಿಯಾಗಿ ಬದುಕಬಾರದೇಕೆ.? ಡೋಂಟ್ವರಿ ಅನ್ಕೊಂಡು ನಮ್ಮತನವನ್ನು ಒಪ್ಪಿಕೊಂಡು, ಅಪ್ಪಿಕೊಂಡು ಸಂಭ್ರಮಿಸುವುದರಲ್ಲಿದೆ ಜೀವ-ಜೀವನದ ಚೈತನ್ಯ ಝರಿ. ಏನಂತೀರಾ..?”
-ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.

ಡೋಂಟ್ವರಿ ರೀ..!

ಸದರ ಕೊಟ್ರೆ
ತಲೆಮೇಲೆ ಸವಾರಿ.!
ಖಡಕ್ಕಾಗಿ ಇದ್ರೆ
ದೂರಾಗ್ತಾರೆ ಹೌಹಾರಿ.!

ಸಹಿಸಿಕೊಂಡ್ರೆ..
ಶಹಭಾಷಗಿರಿ.!
ತಿರುಗಿ ಬಿದ್ರೆ
ಬೆನ್ನಿಂದೆ ಪಿತೂರಿ.!

ಹೂಗುಡ್ತಿದ್ರೆ..
ಹೊಗಳಿಕೆ ತುತ್ತೂರಿ.!
ಗುರುಗುಡ್ತಿದ್ರೆ..
ನಿಂದನೆಯ ನಗಾರಿ.!

ಕೇಳಿದ್ದು ಕೊಟ್ರೆ
ನಿಮಗೆ ಅಭಾರಿ.!
ಕೊಡಲಿಲ್ಲ ಅಂದ್ರೆ
ನೀವು ಅಬ್ಬೆಪಾರಿ.!

ಎದ್ರೆ ಚಮಚಾಗಿರಿ
ಬಿದ್ರೆ ದಾದಾಗಿರಿ
ಜನರು ತರಾವರಿ
ಸದಾ ಹುಷಾರಾಗಿರಿ.!

ಇದು ಲೋಕಾರೀ..
ಇರೋದು ಹೀಗೇರೀ..
ಕಣ್ಣುರಿ ಹೊಟ್ಟೆಯುರಿ
ಎಲ್ಲಾ ಇರೋದೆ ರೀ.!

ನಮಗಿರಲಿ ನಮ್ಮದಾರಿ
ನಮ್ಮ ಜವಾಬ್ಧಾರಿ.!
ಬೇಡ ಬೇಡದ ಉಸಾಬರಿ
ಇಲ್ಲಸಲ್ಲದ ಹರಾಫಿರಿ.!

ಚಿಂತೆ ಯಾತನೆ ಏಕ್ರಿ?
ನಿನ್ನೆಯದು ಹಿಸ್ಟರಿ
ನಾಳೆಯದು ಮಿಸ್ಟರಿ
ಇಂದಷ್ಟೆ ಸತ್ಯ ನಗ್ತಿರಿ.!

ಆರಕ್ಕೇರ್ದೆ ಮೂರಕ್ಕಿಳಿದೆ
ಸುಮ್ಮನೆ ಆರಾಮಾಗಿರಿ
ಮಾಡ್ಕೋಬೇಡಿ ಕಿರಿಕಿರಿ
ಯಾವ್ದುಕ್ಕೂ ಡೋಂಟ್ವರಿ.!

ಬದುಕು ನಿಮ್ಮಿಷ್ಟರೀ
ನಷ್ಟಕಷ್ಟ ಮಾಡ್ಕೋಬೇಡ್ರಿ
ಬೇಡ ಸುಮ್ಮನೆ ವರಿ
ಬಿ ಯ್ಯಾಪಿ ಡೋಂಟ್ವರಿ.!

-ಎ.ಎನ್.ರಮೇಶ್. ಗುಬ್ಬಿ.