ಅನುದಿನ ಕವನ-೧೮೫೨, ಕವಿ: ಎ.ಎನ್ ರಮೇಶ್ ಗುಬ್ಬಿ, ಕವನದ ಶೀರ್ಷಿಕೆ:ಸತ್ಯ ಸಾಕ್ಷಾತ್ಕಾರ.!

“ಇದು ಬದುಕಿನ ತತ್ವ ಝೇಂಕಾರದ ಮಾರ್ಮಿಕ ಕವಿತೆ. ಬಾಳ ಬೆಳಕಿನ ಸಾಕ್ಷಾತ್ಕಾರದ ನಿತ್ಯ ಭಾವಗೀತೆ. ಇಲ್ಲಿ ಆಳಕ್ಕಿಳಿದಷ್ಟೂ ಜೀವ-ಜೀವನದ ಸಾರವಿದೆ. ಅರ್ಥೈಸಿದಷ್ಟೂ ಬದುಕು-ಬೆಳಕಿನ ವಿಸ್ತಾರವಿದೆ. ಹೆಚ್ಚೇನೂ ಹೇಳಲಾರೆ. ಓದಿದಷ್ಟೂ ನಿಮಗೆ ಆಪ್ತವಾಗುವ ಸ್ವಾನುಭವ ಲೋಕಾನುಭಾವಗಳ ಪರಮಾಪ್ತಗೀತೆಯಿದು. ನಮ್ಮೊಳಗೊಂದು ವಿರಕ್ತತೆಯ ಬೆಳಕ ಚೆಲ್ಲಿ, ಆಧ್ಯಾತ್ಮದ ಕಾಂತಿ ಹರಡಿ, ಭಾವ ಬೆಳದಿಂಗಳಾಗಿಸುವ ಅಕ್ಷರಪ್ರಣತೆಯಿದು. ಏನಂತೀರಾ..?”

-ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.

ಸತ್ಯ ಸಾಕ್ಷಾತ್ಕಾರ.!

ಹಿಗ್ಗಿ ತುಂಬಿಕೊಂಡಂತೆ ಬಂಧ ಚಿಲುಮೆಯನ್ನು
ಬಗ್ಗಿ ತಾಳಿಕೊಳ್ಳಲೇಬೇಕು ಬೆಂಕಿ ಕುಲುಮೆಯನ್ನು
ಆರಾಧಿಸಿ ಆಸ್ವಾಧಿಸಿದಂತೆ ಪ್ರೀತಿಯ ನಲಿವನ್ನು
ಆದರಿಸಿ ಅನುಭವಿಸಲೇಬೇಕು ಪ್ರೀತಿ ನೋವನ್ನು.!

ನಗೆಯ ಬಿರಿದು ಅಪ್ಪಿಕೊಂಡಂತೆ ಗೆಲುವನ್ನು
ಎದೆಯ ತೆರೆದು ಒಪ್ಪಿಕೊಳ್ಳಬೇಕು ಸೋಲನ್ನು
ಅನಂದಿಸಿ ಸವಿದಂತೆ ಸಂತಸ ಸಂಭ್ರಮವನ್ನು
ಅರಗಿಸಿಕೊಳ್ಳಲೇಬೇಕು ಸಂಕಟ ಸೂತಕವನ್ನು.!

ಅರಳಿ ಆವರಿಕೊಂಡಂತೆ ಸಿಹಿ ಸಮಯವನ್ನು
ನರಳಿ ಸಾವರಿಸಿಕೊಳ್ಳಲೇಬೇಕು ಕಹಿ ಕಾಲವನ್ನು
ಏರಿ ಹರ್ಷೋದ್ಗಾರದಿ ನಮಿಸಿದಂತೆ ಶೃಂಗವನ್ನು
ಜಾರಿದಾಗ ಸಹಿಸಿಕೊಳ್ಳಲೇಬೇಕು ಕಂದಕವನ್ನು.!

ಅವಡುಗಚ್ಚಿ ಹಸನ್ಮುಖದಿ ನುಂಗಬೇಕು ಎಲ್ಲವನ್ನು
ಕುಡಿಯಲೇಬೇಕು ಆನಂದಭಾಷ್ಪ ಅಶ್ರು ಎರಡನ್ನು
ಸ್ವೀಕರಿಸಲೇಬೇಕು ಬಾಳಪಾಲಿಗೆ ಬಂದ ಸಕಲವನ್ನು
ಸಾಕ್ಷೀಕರಿಸಲೇಬೇಕು ಇಲ್ಲಿ ಸತ್ಯ ಮಿಥ್ಯೆ ಎರಡನ್ನು.!

ಪ್ರತಿ ಉಳಿಯೇಟಿಗೊಡ್ಡಬೇಕು ಒಳಗಣ ಕಸುವನ್ನು
ಶಿಲೆಯಿಂದ ಶಿಲ್ಪವಾಗಿಸಿಕೊಳ್ಳಲೇಬೇಕು ಜೀವವನ್ನು
ಸೈರಿಸಿಕೊಳ್ಳುತ ಪ್ರತಿ ಕ್ಷಣ ಬದಲಾಗುವ ಜಗವನ್ನು
ಸ್ವೀಕರಿಸಲೇಬೇಕು ಕೊರಡಾಗಿಸಿಕೊಂಡು ಭಾವವನ್ನು.!

ದೂರಿಕರಿಸುತ್ತಾ ಭ್ರಮೆಭ್ರಾಂತಿಯ ಅಂಧಕಾರವನ್ನು
ಸಾಕಾರವಾಗಿಸಿಗೊಳ್ಲಬೇಕು ವಾಸ್ತವದ ನಿಜಬೆಳಕನ್ನು
ಸಾಗಬೇಕು ಮೂಡಿಸಿಕೊಳ್ಳುತ್ತಾ ನಶ್ವರದ ಅರಿವನ್ನು
ನಿರ್ಲಿಪ್ತತೆ ರೂಡಿಸುತ್ತ ಮಾಗಿಸಲೇಬೇಕು ಬದುಕನ್ನು.!

ಸಮಚಿತ್ತದಿ ಸ್ಮಿತಪ್ರಜ್ಞರಾಗಿ ಮುಟ್ಟಲೇಬೇಕು ಗುರಿ
ರಾಗದ್ವೇಷ ಮೀರಿ ಹಿಡಿಯಬೇಕು ವಿರಾಗದ ದಾರಿ
ಕತ್ತಲಲ್ಲಿ ಜೊತೆ ಬರದು ನಮ್ಮ ನೆರಳು ಜೊತೆಸಾರಿ
ನಡೆಯಬೇಕು ನಾವೆ ನಮ್ಮ ಹಾದಿಗೆ ಬೆಳಕ ಬೀರಿ.!

ನುಡಿಯಲ್ಲ ನಡೆದ ಪ್ರಾಮಾಣಿಕ ನಡೆಯಷ್ಟೇ ಶಾಶ್ವತ
ಕೊಟ್ಟಿದ್ದಕ್ಕಲ್ಲ ಪಡೆದದ್ದಕ್ಕಷ್ಟೇ ಋಣಿ ಈ ಜೀವಿತ
ಬಂಧ ಭಾಗ್ಯ ಸಕಲವು ವಿಧಾತ ಬರೆದಷ್ಟೇ ನಿಶ್ಚಿತ
ಕಡೆಗೆ ನಿರ್ವಿಕಾರ ನಿರ್ಮೋಹದಿ ಹೋಗಬೇಕು ನಗುತ.!

-ಎ.ಎನ್.ರಮೇಶ್.ಗುಬ್ಬಿ.

Leave a Reply

Your email address will not be published. Required fields are marked *