ಅನುದಿನ ಕವನ-೧೮೬೩, ಕವಿ:ಸದಾಶಿವ ಸೊರಟೂರು

ಸಾಕಿಕೊಂಡಿದ್ದಾಳೆ ಮುದ್ದು ಉಗುರುಗಳನ್ನು
ಅಪ್ಪ ಬಿಟ್ಟು ಹೋದ
ಪುಟ್ಟ ಕನಸುಗಳಂತೆ..

ಕನಸಿಗೆ ಕನಸು ತಾಕಿದೊಡೆ
ಕನಸು ಒಡೆಯುವುದಿಲ್ಲ
ಜಿನುಗುತ್ತದೆ ಪುಟ್ಟ ಬದುಕೊಂದು

ಎರಡು ಮಾತುಗಳ ನಡುವಿನ
ಸಣ್ಣ ಮೌನದಲ್ಲಿ
ತುಂಬು ಬಸ್ಸಿನಲ್ಲೂ ದಕ್ಕುವ
ಒಂಟಿತನದಲ್ಲಿ
ಈಕೆಗೆ ಸಿಗದೇ ಹೋದದ್ದು
ಉಗುರಿನ ಮೋಹಕ ತುದಿಯಲಿ
ಗಾಢವಾಗಿ ಮೆತ್ತಿಕೊಂಡಿರುತ್ತದೆ

ಎಷ್ಟೊ ಬಾರಿ ಅನಿಸಿದೆ
ಈ ಒಂಟಿ ಹುಡುಗಿ ಎಲ್ಲಿಂದ
ಕಡ ತಂದುಕೊಂಡಿದ್ದಾಳೆ
ಪುಟ್ಟ ಕಣ್ಣುಗಳಲಿ ಸೋರುವ ಇಷ್ಟೊಂದು
ಬೆಳಕನು
ಎಂದುಕೊಂಡಾಲೆಲ್ಲಾ
ಉತ್ತರದಂತೆ ನೆನಪಾಗುತ್ತವೆ
ಬೆರಳುಗಳು

ಅವು ಅಪ್ಪ ಹಿಡಿದ ಬೆರಳುಗಳು
ಅಪ್ಪನ ಬೆರಳು ಹಿಡಿದ ಒಲವುಗಳು

ಇಡೀ ಹಗಲನು ಹದಮಾಡಿಕೊಂಡು
ಸವರಿಕೊಳ್ಳುತ್ತಾಳೆ
ಉಗುರುಗಳಿಗೆ..
ಬೋರಾದರೆ ಕತ್ತಲನು ಸುರುವಿಕೊಂಡು
ತೊಳೆದುಕೊಂಡು ಹಗುರಾಗುತ್ತಾಳೆ ಹಗಲನು

ಬೆಳಗು ಸಂಜೆಗಳನ್ನು
ತೊಡೆ ಮೇಲೆ ಹರವಿಕೊಂಡು
ತುದಿ ಉಗುರಿನಿಂದ
ಮೀಟುತ್ತಾಳೆ,
ಹೊರಡಿಸುತ್ತಾಳೆ ರಾಗಗಳನ್ನು
ತನ್ನ ಹಾಡಿಗೆ ತಾನೇ ಸೋತು
ಒಂದಾಗುತ್ತಾಳೆ
ಹಗಲಿನೊಳಗಿನ ಇರುಳಿನಂತೆ
ಇರುಳಿನೊಳಗಿನ ಹಗಲಿನಂತೆ!

‘ಇದೆಂತಕೆ.. ಮಾರಾಯ್ತಿ ಕತ್ತರಿಸಿಬಿಡು..’
ಅಂದಿದ್ದರಂತೆ ಯಾರೊ ಒಮ್ಮೆ
ಈಕೆ ನುಡಿದಿದ್ದಳು ತಣ್ಣಗೆ
‘ಬದುಕಿನ ಮೇಲೆ ಮಣ್ಣು ಅಂಟಿಕೊಂಡಾಗ
ಉಗುರಿನಿಂದ
ಹೀಗೆ…ಹೀಗೆ…
ಕೆರೆದು ಎಸೆದು
ಮತ್ತೆ ನಗಲು ಬೇಕು ಇವು..

ಅಪ್ಪ ಹಿಡಿದು ನಡೆದ ಬೆರಳನು
ಈಗ ಅವನು ಹಿಡಯುತ್ತಾನೆ
ಗೊತ್ತು
ನಡೆಸುತ್ತಾನೆ
ಅಪ್ಪ ಎಲ್ಲಿ ನಿಂತರೊ ಅಲ್ಲಿಂದ ಮುಂದೆ
ಮುಂದೆ ಮುಂದೆ

ಇವು ಬರೀ ಬೆರಳಲ್ಲ
ಅಪ್ಪನೂ..
ಅವನೂ..

-ಸದಾಶಿವ ಸೊರಟೂರು

Leave a Reply

Your email address will not be published. Required fields are marked *