ಅನುದಿನ ಕವನ-೧೮೬೫, ಕವಯತ್ರಿ: ಡಾ. ನಾಗರತ್ನ ಅಶೋಕ ಭಾವಿಕಟ್ಟಿ, ಇಳಕಲ್ಲು, ಕವನದ ಶೀರ್ಷಿಕೆ: ಇಲ್ಲಿ ಕೇಳೆ ಇವಳೇ

ಇಲ್ಲಿ ಕೇಳೆ ಇವಳೇ

ಇಲ್ಲಿ ಕೇಳೆ ಇವಳೇ
ಅದೆಷ್ಟು ದಿನ ಬಯಸಿದ್ದೇನೋ
ನಿನ್ನೊಡನೆ ಹೀಗೆ
ಜಗವ ಮರೆತು
ಬುಜಕ್ಕೆ ಭುಜ ಹಚ್ಚಿ ಕೂಡಬೇಕೆಂದು
ಇಂದು ಈಡೇರಿದಂತಿದೆ ನೋಡು

ಆದರೆ
ಅದೆಷ್ಟು ಹೊತ್ತು ಕೂಡುವುದು
ಸುಮ್ಮನೆ ಭಾವ ತೀರದ ಮೇಲೆ
ಏರಿ ಇಳಿಯುತಿರುವ
ಆ ಅಲೆಗಳನ್ನೇ ದಿಟ್ಟಿಸುತ್ತಾ

ಒಂದೆರಡು ಹೆಜ್ಜೆ ಮುಂದೆ
ನಡೆಯೋಣವೇ
ಎಲ್ಲಿಯೂ ಎಡವದಂತೆ
ಯಾವ ಕಡೆಗೂ ಜಾರದಂತೆ
ಬಿಗಿಯಾಗಿ
ನಿನ್ನ ಕೈ ನಾನು ನನ್ನ ಕೈ ನೀನು ಹಿಡಿದು

ಅಲ್ಲಿಗೆ ಮುಗಿಯದು ಕೇಳೆ ಇವಳೆ
ನಮ್ಮಿಬ್ಬರ ಪಯಣ
ನಡೆಯಬೇಕಿದೆ ಕೊನೆಯವರೆಗೂ
ದಾರಿ ತಪ್ಪದಂತೆ ಎಲ್ಲಿಯೂ ಬೀಳದಂತೆ
ಬಹುಶಃ
ಇದು ಮುಗಿಯದ ಪಯಣದಂತೆ

ಆಗಸದ ಚಂದಿರನ
ಹಿಡಿಯುವ ಪ್ರಯತ್ನ
ಬಿಡಲು ಆಗದು ಹಿಡಿಯಲು ಆಗದು
ಬಾ ಮರಳಿ ಬಿಡೋಣ
ಇದು ಆಗದ ಕೆಲಸ

ದೂರದಿ ಹೊಳೆವ ತಾರೆಯ ನೋಡುವಂತೆ
ನಿನ್ನ ಮೊಗವ ನೋಡುತ್ತಲೇ
ಕಾಲ ಕಳೆದುಬಿಡುವೆ
ನಿನ್ನ ಕಣ್ಣಂಚಿನ ಬಾಗಿಲಿನಿಂದಾದರು
ನಿನ್ನೊಳಗೆ ನುಸುಳಬಹುದೆಂಬ ಸಣ್ಣ ಆಸೆ ಇದೆ
ಮುಳುಗುವವನಿಗೆ ಹುಲುಕಡ್ಡಿ ಆಸರೆಯಂತೆ

ಹೆಜ್ಜೆಗೆ ಹೆಜ್ಜೆ ಜೊತೆ ಮಾಡಿ
ನಡೆದಷ್ಟು ನಡಿಗೆ ಭಾರವೆ
ಪರಿಹಾರವೇನು ಗೊತ್ತೆ ಇವಳೇ
ಕಿರುತುದಿ ಬೆರಳ ಹಿಡಿದು ನಡೆದು ಬಿಡೋಣ
ಬದುಕಿನ ಗುರಿಯನ್ನಾದರೂ ತಲುಪಬಹುದು

-ಡಾ. ನಾಗರತ್ನಾ ಅಶೋಕ ಭಾವಿಕಟ್ಟಿ, ಇಳಕಲ್ಲು