ಅವರಿಗೆ ನಾನು
ಅಷ್ಟೇನೂ ಅಪರಿಚಿತಳಲ್ಲದಿದ್ದರೂ
ಹೊಸ ಹೊಸ ವಿಧಾನಗಳನ್ನು
ಹುಡುಕಿಕೊಳ್ಳುತ್ತಾರೆ ಅವರು ನನ್ನನ್ನು
ಘಾಸಿ ಮಾಡಲು.
ಒಬ್ಬ ತನ್ನ ಕೈಗಳನ್ನು ಬಳಸಿದರೆ
ಇನ್ನೊಬ್ಬ ತನ್ನ ದನಿಯನ್ನ,
ಹಾಗು ಮತ್ತೊಬ್ಬ ಝಳಪಿಸಿಯೇಬಿಟ್ಟ
ನನ್ನೆದುರು ತನ್ನ ಮೌನವನ್ನ.
ಗದ್ಯ ಬರೆಯುತ್ತಾರೆ, ಪದ್ಯ ಹಾಡುತ್ತಾರೆ
ಬಣ್ಣ ಬಣ್ಣದ ಮುಖವಾಡ ಧರಿಸಿ
ಜೋರು ಜೋರಾಗಿ
ಮೈಮ್ ಶೋ ಮಾಡುತ್ತಾರೆ
ಕೋಟೆಗಳ ನಡುವೆ ನಿಲ್ಲಿಸಿ ಗುರಿ ಇಡುತ್ತಾರೆ,
ತಪ್ಪಿದ ಗುರಿಗಳ ಒಪ್ಪದೇ
ಸೋತ ಬಾಣಗಳ ಮಾನ ಮುಚ್ಚಲು
ದಪ್ಪ ಪುಸ್ತಕಗಳ ಉದಾತ್ತ ಸಾಲುಗಳ
ಅಸಹ್ಯವಾಗಿ ಕೋಟ್ ಮಾಡುತ್ತಾರೆ,
ಸತ್ಯ ಸುಳ್ಳುಗಳ ಹೊಸ ವ್ಯಾಖ್ಯಾನಗಳಲ್ಲಿ
ದಿಕ್ಕು ತಪ್ಪಿಸುತ್ತಾರೆ.
ಅಪರಿಚಿತಳಾಗಬೇಕು ನಾನು ಎಲ್ಲರಿಗೂ,
ಪರಿಚಿತಳಾಗಬೇಕು ಮಾತ್ರ ಅವನಿಗೆ
ನಾನು ಬಯಸಿದವನಿಗೆ,
ಅವನಿಗೂ ಕೊಡದ ಹಾಗೆ ಯಾವುದೇ
ಸುಳಿವು.

-ಚಿದಂಬರ ನರೇಂದ್ರ, ಬೆಂಗಳೂರು
