
ಬಳ್ಳಾರಿ, ಜು.18: ಬಳ್ಳಾರಿ ಸೇವಾ ಸಮಿತಿಯ ಮುಖಂಡರು ತಾಲೂಕಿನ ಹಲಕುಂದಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ (ವಿಬಿಎಸ್ ಮಠ) ಎಲ್ಲಾ ಮಕ್ಕಳಿಗೆ ಬ್ಯಾಗ್ ವಿತರಿಸಿದರು.
ಶನಿವಾರ ಶಾಲೆಯ ಆವರಣದಲ್ಲಿ ಜರುಗಿದ ಸರಳ ಸಮಾರಂಭದಲ್ಲಿ ಸಮಿತಿಯ ಮುಖಂಡರೂ ಆದ ಹ್ಯಾಲೇಸ್ ಸ್ಟೀಲ್ ಕಂಪನಿ ಸಂಸ್ಥಾಪಕ ಕೆ. ಎಂ. ಶಿವಮೂರ್ತಿ ಅವರು ಮಾತನಾಡಿ ಪ್ರತಿ ವರ್ಷದಂತೆ ಸಮಿತಿ ಕಲಿಕೆಗೆ ಪೂರಕವಾಗುವಂತೆ ಶಾಲೆಯ ಮಕ್ಕಳಿಗೆ ಶಾಲಾ ಬ್ಯಾಗ್ ಸೇರಿದಂತೆ ಅಗತ್ಯ ಪರಿಕರಗಳನ್ನು ವಿತರಿಸುತ್ತಿದೆ ಎಂದರು.
ಮಕ್ಕಳ ಉತ್ತಮ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದ್ದು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಬಳ್ಳಾರಿ ಸೇವಾ ಸಮಿತಿಯ ಕಾರ್ಯದರ್ಶಿ ವಿ. ರಾಮಚಂದ್ರ ಅವರು ಮಾತನಾಡಿ ಮಕ್ಕಳು ಉತ್ತಮ ಶಿಕ್ಷಣ ಪಡೆದು ದೇಶದ ಉತ್ತಮ ಪ್ರಜೆಗಳಾಗಬೇಕು ಎಂದು ಹೇಳಿದರು.
ಬಳ್ಳಾರಿ ಸೇವಾ ಸಮಿತಿಯ ಅಧ್ಯಕ್ಷ ಸುರೇಂದ್ರ ಬಪ್ನಾ ಮಕ್ಕಳಿಗೆ ಶಾಲಾ ಬ್ಯಾಗ್ ವಿತರಿಸಿ, ನೃತ್ಯ ಮಾಡಿದ ಎಲ್ಲಾ ಮಕ್ಕಳಿಗೂ ಹಣ ನೀಡುವ ಮೂಲಕ ಪ್ರೋತ್ಸಾಹ ನೀಡಿದರು. ಸಮಿತಿಯ ಸದಸ್ಯ ಟಿ ಶ್ರೀನಿವಾಸ್, ವೀರಬಸಪ್ಪ ಮಕ್ಕಳಿಗೆ ಬ್ಯಾಗ್ ವಿತರಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಸಿ. ಮಂಜುನಾಥ್ ಉಪಸ್ಥಿತರಿದ್ದರು.
ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯ ಗುರು ಕೆಂಚಪ್ಪ ಕೆ ಅವರು ಮಾತನಾಡಿ ಬಳ್ಳಾರಿ ಸೇವಾ ಸಮಿತಿ ಅವರ ಸಮಾಜ ಮುಖಿ ಸೇವೆಗಳನ್ನು ಕೊಂಡಾಡಿದರು.

ಹಿರಿಯ ಶಿಕ್ಷಕಿ ಮೀನಾಕ್ಷಿ ಕಾಳೆ, ಸಹ ಶಿಕ್ಷಕಿ ವಿಶಾಲಾಕ್ಷಿ ಎಸ್ ಕೆ, ಜಯಲಕ್ಷ್ಮಿ ನಿರ್ವಹಿಸಿದರು.
