ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ‘ಮಯೂರವರ್ಮ’ ಸಾಹಿತ್ಯ ದತ್ತಿ ಪ್ರಶಸ್ತಿ–2025ಕ್ಕೆ ಹೊಸಪೇಟೆಯ ಯುವ ಕವಿ ವಿಶಾಲ್ ಮ್ಯಾಸರ್ ಸೇರಿದಂತೆ ಐವರು ಆಯ್ಕೆಯಾಗಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತಾಧಿಕಾರಿ ಕೆ.ಎ. ದಯಾನಂದ, ಭಾ.ಆ.ಸೇ., ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಮ್ಯಾಸರ್ ಸೇರಿದಂತೆ ಐವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ₹25,000 ನಗದು, ಸ್ಮರಣಿಕೆ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಯುವ ಕವಿ ವಿಶಾಲ್ ಮ್ಯಾಸರ್ ಅವರು, ‘ಬಟ್ಟೆಗಂಟಿದ ಬೆಂಕಿ’ ಕವನ ಸಂಕಲನದ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಅವರ ‘ಮಾತಾಡೇ ಜಾತಮುಖಿ’ ಕವನ ಸಂಕಲನ ಪ್ರಕಟಣೆಯ ಹಂತದಲ್ಲಿದೆ. ಹಂಪಿ ಟೈಮ್ಸ್ ಪತ್ರಿಕೆಯಲ್ಲಿ ಹವ್ಯಾಸಿ ಪತ್ರಕರ್ತರಾಗಿಯೂ ಆಗಾಗ ಕಾರ್ಯನಿರ್ವಹಿಸುವ ಮ್ಯಾಸರ್, 2025ರ ಅಮೃತ ಕಾವ್ಯ ಪ್ರಶಸ್ತಿ ಪುರಸ್ಕೃತರಾಗಿದ್ದು, 2026ರ ಕನ್ನಡ ಸೃಜನಶೀಲ ಬರವಣಿಗೆಯ Toto ಪ್ರಶಸ್ತಿಗೆ ಶಾರ್ಟ್‌ಲಿಸ್ಟ್ ಆಗಿದ್ದಾರೆ. 2024ರಲ್ಲಿ ಭಾರತ-ಚೀನಾ ಸ್ನೇಹ ಸಂಘದ ಪ್ರತಿನಿಧಿಯಾಗಿ ಬೀಜಿಂಗ್ ಸಿಸ್ಟರ್ ಸಿಟಿ ವರ್ಲ್ಡ್ ಯೂತ್ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿದ್ದರು.
2007ರಿಂದ ನೀಡಲಾಗುತ್ತಿರುವ ‘ಮಯೂರವರ್ಮ’ ಪ್ರಶಸ್ತಿಯು 45 ವರ್ಷ ವಯೋಮಿತಿಯೊಳಗಿನ ಯುವ ಕನ್ನಡ ಬರಹಗಾರರನ್ನು ಗುರುತಿಸಿ ಗೌರವಿಸುತ್ತಿದೆ.
ಅಭಿನಂದನೆ: ಕರ್ನಾಟಕ ಕಹಳೆ ಸಾಹಿತ್ಯ ಬಳಗದಲ್ಲಿ ಸಕ್ರೀಯರಾಗಿರುವ ಉದಯೋನ್ಮುಖ ಕವಿ ವಿಶಾಲ್ ಮ್ಯಾಸರ ಅವರನ್ನು ಕರ್ನಾಟಕ ಕಹಳೆ ಡಾಟ್ ಕಾಮ್ ನ ಸಂಪಾದಕ ಸಿ. ಮಂಜುನಾಥ ಅವರು ಅಭಿನಂದಿಸಿದ್ದಾರೆ.
