ಮತದಾನದ ಹಕ್ಕಿನಿಂದ ಯಾರನ್ನೂ ತೆಗೆಯುವಂತಿಲ್ಲ ಎನ್ನುವ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಜಸ್ಟೀಸ್ ಉಜ್ವಲ್ ಭುಯಾನ್ ಅವರ ಹೇಳಿಕೆ ಸಾಂವಿಧಾನಿಕವಾಗಿಯೇ ಬಲು ಮಹತ್ವದ್ದು. ಏಕೆಂದರೆ ಇದು ಸಂವಿಧಾನದ ಮೂಲ ತತ್ವಕ್ಕೆ ಸಂಬಂಧಿಸಿದ ವಿಷಯ. ಕೇಶವಾನಂದ ಭಾರತಿ ಮೊಕದ್ದಮೆಯಲ್ಲಿ ಅಟಾರ್ನಿ ಜನರಲ್ ಸಂಸತ್ತಿಗೆ ಯಾವ ಶಾಸನ ಬೇಕಾದರೂ ಮಾಡುವ ಅಧಿಕಾರವಿದೆ ಎಂದು ವಾದ ಮಂಡಿಸುತ್ತಾರೆ. ತಕ್ಷಣ ಜಸ್ಟೀಸ್ ಕೆ. ಎಸ್. ಹೆಗ್ಡೆ,”ಹಾಗಿದ್ದರೆ ಈಗ ಇರುವವರು ಬದುಕಿರುವ ತನಕ ಅವರೊಬ್ಬರೇ ಪ್ರಧಾನ ಮಂತ್ರಿ ಎಂದು ಸಂಸತ್ತು ಶಾಸನ ಮಾಡಬಹುದೆ?” ಎಂದು ಕೇಳುತ್ತಾರೆ. ಹೀಗೆ ಸಂಸತ್ತು ಕೂಡ ಸಂವಿಧಾನದ ಮೂಲ ತತ್ವವನ್ನು ಉಲ್ಲಂಘಿಸುವಂತಿಲ್ಲ ಎನ್ನುವ ತೀರ್ಪು ಬಂದದ್ದು. ಈ ತ್ರಿವಳಿ ತಲ್ಲಾಕ್ ರದ್ಧತಿ, ಏಕರೂಪ ನಾಗರಿಕ ಸಂಹಿತೆಗಳ ಬಗ್ಗೆಯೆಲ್ಲ ವಿರೋಧ ಪಕ್ಷಗಳು ಮಂಡಿಸುವ ವಾದ ಅವರ ಕಾಲ್ಪನಿಕ ಬೆಂಬಲಿಗರ ಪರವಾಗಿ ಅವರು ಮಂಡಿಸುವ ವಾದವಾಗಿರುತ್ತದೆ ಹೊರತು ಸಂವಿಧಾನದ ನಿಲುವಲ್ಲ. ಯಾವುದೇ ಪಕ್ಷ ತನ್ನ ಅಜೆಂಡಾವನ್ನು ಜನತೆಯ ಮುಂದೆ ಮಂಡಿಸಿ ಓಟ್ ಪಡೆದು ಸರ್ಕಾರ ರಚಿಸಿದಾಗ ಅದರ ಅಜೆಂಡಾವನ್ನು ಜಾರಿಗೆ ತರುವ ಅಧಿಕಾರ ಸಂವಿಧಾನಬದ್ಧವಾಗಿಯೇ ಅದಕ್ಕಿದೆ. ಸರ್ಕಾರ ಮಾಡಿದ್ದನ್ನೆಲ್ಲ ಸಂವಿಧಾನ ಬಾಹಿರ ಎನ್ನುವ ಕೀಟಲೆಗಳು ಸ್ವೀಕಾರಾರ್ಹ ಅಲ್ಲ.
ಆದರೆ ಮತದಾನದ ಹಕ್ಕು ಆ ರೂಪದ್ದಲ್ಲ. ಕಾರ್ಯಾಂಗ ಮತ್ತು ಶಾಸಕಾಂಗಗಳ ಅಧಿಕಾರಗಳು ಚುನಾವಣೆಯಲ್ಲಿ ಪಡೆಯುವ ಬಹುಮತವನ್ನೆ ಆಧರಿಸಿವೆ. ಆದ್ದರಿಂದ ಚುನಾವಣೆಯು ಸಂವಿಧಾನದ ಮೂಲತತ್ವ. ಸಂವಿಧಾನದಿಂದ ನೇಮಕವಾಗಿರುವ ಚುನಾವಣಾ ಆಯೋಗವು ಮತದಾನದ ಹಕ್ಕನ್ನು ರಕ್ಷಿಸಬೇಕಾದ ಸಂಸ್ಥೆ. ಭಾರತೀಯರಲ್ಲದವರು ದೇಶದ ಒಳ ನುಸುಳಿದ್ದಾರೆಂಬ ಗುಮಾನಿ ಬಂದರೆ ಅಂತಹವರನ್ನು ಪತ್ತೆ ಹಚ್ಚಿ ಹಿಂದಕ್ಕೆ ಕಳಿಸುವುದು ಗೃಹ ಇಲಾಖೆಯ ಜವಾಬ್ದಾರಿ ಹೊರತು ಅದು ಚುನಾವಣಾ ಆಯೋಗದ ಕೆಲಸವಲ್ಲ. ಇಂತಿಂತವರು ವಿದೇಶೀಯರು ಎಂದು ಪತ್ತೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸುವುದೂ ಚುನಾವಣಾ ಆಯೋಗದ ಕೆಲಸವಲ್ಲ. ಅದಕ್ಕೆ ಬೇಕಾದರೆ ಪ್ರತ್ಯೇಕ ಶಾಸನವನ್ನು ಸಂಸತ್ತು ಮಾಡಿ ಬೇರೆಯೇ ಸಂಸ್ಥೆಯನ್ನು ಹುಟ್ಟು ಹಾಕಬಹುದು. ಮತ್ತು ಇಂತಿಷ್ಟು ಜನರನ್ನು ಪತ್ತೆ ಮಾಡಿ ಅವರವರ ದೇಶಕ್ಕೆ ವಾಪಾಸು ಕಳಿಸಲಾಗಿದೆ ಎಂದು ಸರ್ಕಾರ ಸಂಸತ್ತಿಗೆ ವರದಿ ನೀಡಬೇಕಾಗುತ್ತದೆ. ವಿದೇಶಿ ನುಸುಳುಕೋರರನ್ನು ವಾಪಸ್ ಕಳಿಸಬೇಕು ಮತ್ತವರಿಗೆ ಮತದಾನದ ಹಕ್ಕು ಇರತಕ್ಕದ್ದಲ್ಲ ಎನ್ನುವ ವಿಚಾರದಲ್ಲಿ ಭಿನ್ನಾಭಿಪ್ರಾಯವಿಲ್ಲ. ಆದರೆ ಅಷ್ಟೆಲ್ಲ ಮಾಡಿ ಪಶ್ಚಿಮ ಬಂಗಾಳದಿಂದ ಎಷ್ಟು ವಿದೇಶೀಯರನ್ನು ವಾಪಾಸು ಕಳಿಸಲಾಗಿದೆ ಎಂದು ಹೇಳಬೇಕಲ್ಲ. ಭಾರತೀಯರ ಮತದಾನದ ಹಕ್ಕನ್ನು ರದ್ದುಪಡಿಸುವ ಅಧಿಕಾರ ಚುನಾವಣಾ ಆಯೋಗಕ್ಕೂ ಇಲ್ಲ. ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗಗಳಿಗೂ ಇಲ್ಲ. ಮತದಾನದ ಹಕ್ಕನ್ನು ರದ್ದುಪಡಿಸುವುದು ಸಂವಿಧಾನವನ್ನು ರದ್ದುಪಡಿಸಿದ ಹಾಗೆಯೇ ಆಗುತ್ತದೆ. ಸಾಂವಿಧಾನಿಕ ಪ್ರಕ್ರಿಯೆಗಳು ನಿಂತಿರುವುದೇ ಮತದಾನದ ಮೇಲೆ. ಮತಚಲಾಯಿಸಲು ಬಯಸಿದ ಒಬ್ಬ ಮತದಾರನಿಗೆ ಮತ ಚಲಾವಣೆಯ ಅಧಿಕಾರವನ್ನು ನಿರಾಕರಿಸಿ ಒಂದು ಶಾಸನ ಸಭೆ ರಚನೆಯಾದರೆ ಆ ಶಾಸನ ಸಭೆ ತಾತ್ವಿಕವಾಗಿ ಸಂವಿಧಾನ ಬಾಹಿರ ಶಾಸನ ಸಭೆಯಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಸಂವಿಧಾನದ ಮಹಾನ್ ಸಂರಕ್ಷಕನಾಗಿ ಸಂವಿಧಾನದಿಂದಲೇ ನೇಮಕ ಆಗಿರುವ ಸುಪ್ರೀಂ ಕೋರ್ಟ್ ಮತದಾರರಿಗೆ ಮತದಾನದ ಅಧಿಕಾರವನ್ನು ಖಾತ್ರಿಪಡಿಸಬೇಕು.

-ಅರವಿಂದ ಚೊಕ್ಕಾಡಿ, ಚಿಂತಕರು, ಪೆರಿಂಜೆ, ದಕ್ಷಿಣ ಕನ್ನಡ
