ದೈಹಿಕ ಸಮಸ್ಯೆಗೆ ಮಾನಸಿಕ ಒತ್ತಡವೇ ಕಾರಣ! -ಸ್ನೇಹಾ ಆನಂದ್, ಬೆಂಗಳೂರು

ದೈಹಿಕ ಸಮಸ್ಯೆಗೆ ಮಾನಸಿಕ ಒತ್ತಡವೇ ಕಾರಣ!
ಇದು ಎಲ್ಲರಿಗೂ ಗೊತ್ತು, ಮುಖ್ಯವಾಗಿ ರಕ್ತದೊತ್ತಡ, ಸಕ್ಕರೆಯ ಖಾಯಿಲೆ ನೇರವಾಗಿ ಮಾನಸಿಕ ಒತ್ತಡದಿಂದಲೇ ಬರುವುದು ಎಂದರೆ ತಪ್ಪಲ್ಲ! ಇವೆರಡು ಸಮಸ್ಯೆಗಳು ನೇರವಾಗಿ ಹೃದಯಕ್ಕೆ ಬಾಧಕ !

ಮನದ ನೆಮ್ಮದಿ ಇರದಿದ್ದರೆ ಅದು ನೇರವಾಗಿ ದೈಹಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ! ಯೌವನದಲ್ಲಿ ಮಾನಸಿಕ ಒತ್ತಡವನ್ನು ತಡೆದುಕೊಂಡಂತೆ ವ್ಯಕ್ತಿಯು ಮಧ್ಯಮ ವಯಸ್ಸಿನಲ್ಲಿ ತಡೆದುದುಕೊಳ್ಳುವುದು ಸ್ವಲ್ಪ ಕಷ್ಟ, ಆದರೆ ಅದೇ ಸಮಯದಲ್ಲೇ ಕುಟುಂಬವು ಹಿಗ್ಗಿ ದೊಡ್ಡದಾಗಿರುತ್ತದೆ!

ಮಗ, ಸೊಸೆ, ಮಗಳು, ಅಳಿಯ, ಮಕ್ಕಳು ಹೀಗೆ ಕುಟುಂಬ ದೊಡ್ಡದಾಗಿ ಬೆಳೆದು ಬಂದಾಗ ಜವಾಬ್ದಾರಿ ಜಾಸ್ತಿಯಾಗಿ ಮನಸ್ಸಿನ ನಿಯಂತ್ರಣ ಕಳೆದುಕೊಂಡರೆ ದೈಹಿಕ ಆರೋಗ್ಯವೂ
ಆಚೆ ಈಚೆಯಾಗುತ್ತದೆ!
ಅದರಿಂದ ದೈಹಿಕ ಆರೋಗ್ಯದಲ್ಲಿ ಮೊದಲು ಕಂಡು ಬರುವುದು ರಕ್ತದೊತ್ತಡ ನಂತರ ಸಕ್ಕರೆ ಖಾಯಿಲೆ!

ಇವೆರಡೂ ಅನುವಂಶೀಯವಾಗಿಯೂ
ಬರಬಹುದು, ಇಲ್ಲ,  ಮನಸಿನ ಮೇಲೆ ಬೀರಿದ ಪರಿಣಾಮವೂ ಕಾರಣವಾಗಿರಬಹುದು, ದಿನ ನಿತ್ಯದ ಆಹಾರ ಕ್ರಮದಿಂದಲೂ ಇರಬಹುದು !
ನಮ್ಮ ಹಿರಿಯರಿಗೆ ಯಾವ ಕಾಯಿಲೆಯೂ ಇಲ್ಲ ಹೀಗಾಗಿ ನನಗೂ ಬರುವುದೇ ಇಲ್ಲ ಎನ್ನುವುದು ಸುಳ್ಳು, ಏಕೆಂದರೆ ಈಗೀನ ಆಚಾರ, ವಿಚಾರ, ಯೋಚನೆ, ಆಹಾರ ಕ್ರಮ, ಇವು ಕೂಡ ದೈಹಿಕ ಆರೋಗ್ಯದ ಮೇಲೆ ಪ್ರಭಾವ ಬೀರುತ್ತವೆ!

ಜಗತ್ತು ಆಧುನಿಕಗೊಂಡಂತೆ ನಮ್ಮ ಜೀವನ ಕ್ರಮವೂ ಬದಲಾಗುತ್ತಿದೆ, ಇದರಿಂದ ದೈಹಿಕ ಬೊಜ್ಜು ಕೂಡ ಜಾಸ್ತಿಯಾಗಿ ಈ ಖಾಯಿಲೆಗಳು ದೇಹದ ಒಳಗೆ ಸೇರಬಹುದು!

ಊಟ ಜಾಸ್ತಿ ಕೆಲಸ ಕಡಿಮೆಯಾದರೂ ನಮ್ಮ ದೈಹಿಕ ಆರೋಗ್ಯದಲ್ಲಿ ವ್ಯತ್ಯಾಸವಾಗುತ್ತದೆ, ನಮ್ಮ ಹಿರಿಯರು ತೊಂಬತ್ತು ವರ್ಷಗಳವರೆಗೂ ಯಾವುದೇ ಖಾಯಿಲೆಯಿಲ್ಲದೇ ಬದುಕುತ್ತಿದ್ದರು, ಈಗ ಮೂವತ್ತು ವರ್ಷ ಮೇಲ್ಪಟ್ಟರೆ ಸಾಕು ರಕ್ತದೊತ್ತಡ , ಸಕ್ಕರೆ ಖಾಯಿಲೆ ಎರಡೂ ಅಣ್ಣ ತಮ್ಮಂದಿರಂತೆ ಬಂದು ವಕ್ಕರಿಸುತ್ತವೆ, ಇದನ್ನು ಧಿಕ್ಕರಿಸಿ ಮುಂದೆ ನಡೆಯಲು ಆಹಾರ ಪದ್ದತಿಯ ಬದಲಾವಣೆ ಹಾಗು ಮಾನಸಿಕ ನೆಮ್ಮದಿ ಇದ್ದರೆ ಮಾತ್ರ ಸಾಧ್ಯ!

ನಮ್ಮ ಹಿರಿಯರು ದಿನವೂ ಬಟ್ಟಲುಗಟ್ಟಲೇ ತುಪ್ಪ ತಿಂದರೂ ಅವರಿಗೆ ಬೊಜ್ಜು ಇರುತ್ತಿರಲಿಲ್ಲ, ಅದಕ್ಕೆ ಕಾರಣ ಅವರಿಗೆ ನಡಿಗೆ ಅಥವಾ ಸೈಕಲ್ ಸವಾರಿ ಎರಡೇ ಇದ್ದವು!
ಎರಡರಿಂದಲೂ ದೇಹಕ್ಕೆ ಒಳ್ಳೆಯ ವ್ಯಾಯಾಮ ದೊರಕುತ್ತಿತ್ತು!

ಈಗ ಹಾಗಲ್ಲ ನಡೆದು ಬರಬೇಕು ಎಂದರೂ ರಸ್ತೆಯಲ್ಲಿ ಜಾಗ ಇರುವುದಿಲ್ಲ ಇದರಿಂದ ಎಲ್ಲಾ ಕಡೆಗೂ ಕಾರು, ಗಾಡಿ ತೆಗೆದುಕೊಂಡು ಹೋಗುವ ಅಭ್ಯಾಸವಾಗಿದೆ ! ಹೀಗಾಗಿ ನಿಗದಿತ ಸಮಯದಲ್ಲಿ ವಾಯು ವಿಹಾರಕ್ಕೆ ಹೋಗುವುದು ಅನಿವಾರ್ಯವಾಗಿದೆ, ಆದರೆ ಜೊತೆಗೆ ವಾಹನಗಳ ಹೊಗೆ, ಧೂಳು ಇವು ಕೂಡ ನಮ್ಮ ದೇಹ ಸೇರುತ್ತವೆ, ಒಂದು ಸಮಸ್ಯೆ ನಿಲ್ಲಿಸಲು ಹೋದರೆ ಇನ್ನೊಂದು ಸಮಸ್ಯೆ ಕಾಡುವ ಹಾಗೆ ಈ ಕಲುಷಿತ ಮಾಲಿನ್ಯ !

ಹೀಗಾಗಿ ಎಲ್ಲರ ಮನೆಯ ಮುಂದೆ ಸರಿಯಾದ ಸ್ಥಳ ಸಿಗದೇ ಅವರು ಹೊರಗೆ ಹೋಗದೆ ಮನೆಯಲ್ಲೇ ಉಳಿದು ಬಿಡುತ್ತಾರೆ, ಇದರಿಂದಲೂ ಬೊಜ್ಜು ಶೇಖರಣೆ ಜಾಸ್ತಿಯಾಗಿ ಈ ಎರಡು ಕಾಯಿಲೆಗಳು ಬೇಗ ದೇಹ ಸೇರಿ ಬಿಡುತ್ತವೆ!

ಜನರ ಆರ್ಥಿಕತೆಯ ಜೀವನ ಮೇಲ್ಮಟ್ಟಕ್ಕೆ ಹೋದಂತೆ ಜೀವಿತಾವಧಿಯ ಸಮಯ ಕೆಳಮಟ್ಟಕ್ಕೆ ಇಳಿಯಲು ಪ್ರಾರಂಭವಾಗಿದೆ, ಜಗತ್ತು ಆಧುನಿಕಗೊಂಡಷ್ಟು ಮಾನಸಿಕ ತಜ್ಞರ ಅವಶ್ಯಕತೆ ಜಾಸ್ತಿಯಾಗಿದ್ದು, ಸ್ವಲ್ಪ ಮನಸ್ಸಿನ ನೆಮ್ಮದಿ, ಕಣ್ತುಂಬಾ ನಿದ್ದೆಗೆ ಜನರು ಹಪಹಪಿಸುತಿದ್ದಾರೆ!

-ಸ್ನೇಹಾ ಆನಂದ್, ಬೆಂಗಳೂರು 🌻

Leave a Reply

Your email address will not be published. Required fields are marked *