ಪ್ರತಿಭಾ ಕಾರಂಜಿ: ಕರೂರು ಗ್ರಾಮದ ವಿದ್ಯಾರ್ಥಿನಿ ಉಮಭಾರತಿಗೆ ಮೂರು ಪ್ರಶಸ್ತಿ

ಬಳ್ಳಾರಿ : ಜಿಲ್ಲೆಯ ಸಿರುಗುಪ್ಪ ತಾಲೂಕಿನ ಕರೂರು ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ 4ನೇ ತರಗತಿ ವಿದ್ಯಾರ್ಥಿನಿ ಕೆ. ಉಮಭಾರತಿ, ಶಾನವಾಸಪುರ ಗ್ರಾಮದಲ್ಲಿ ನಡೆದ ವಲಯಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಮೂರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾಳೆ.

ಸ್ಪರ್ಧೆಯಲ್ಲಿ ಸಂಸ್ಕೃತ ದೈವಿಕ ಶ್ಲೋಕಗಳ ಪಠಣದಲ್ಲಿ ಪ್ರಥಮ ಸ್ಥಾನ, ಕನ್ನಡ ಕಂಠಪಾಠದಲ್ಲಿ ಪ್ರಥಮ ಸ್ಥಾನ ಹಾಗೂ ಕಥೆ ಹೇಳುವ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆಯುವ ಮೂಲಕ ಶಾಲೆ ಹಾಗೂ ಗ್ರಾಮಕ್ಕೆ ಕೀರ್ತಿ ತಂದಿದ್ದಾಳೆ.

ಪುಟ್ಟ ವಯಸ್ಸಿನಲ್ಲೇ ಭಾಷಾ ಪ್ರೌಢಿಮೆ, ನೆನಪಿನ ಶಕ್ತಿ ಹಾಗೂ ಪ್ರತಿಭೆಯನ್ನು ಪ್ರದರ್ಶಿಸಿರುವ ಉಮಭಾರತಿಯ ಸಾಧನೆಗೆ ಕರೂರು ಗ್ರಾಮದ ಸಾರ್ವಜನಿಕರು, ಶಾಲಾ ಶಿಕ್ಷಕರು ಹಾಗೂ ಶಾಲಾ ಆಡಳಿತ ಮಂಡಳಿಯವರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

ಮಗಳ ಈ ಸಾಧನೆಗೆ ಮಾರ್ಗದರ್ಶನ ನೀಡಿ, ಪ್ರೋತ್ಸಾಹಿಸಿದ ಶಾಲೆಯ ಶಿಕ್ಷಕ ವೃಂದಕ್ಕೆ ವಿದ್ಯಾರ್ಥಿನಿಯ ಪೋಷಕರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಉಮಭಾರತಿಯ ಸಾಧನೆ ಗ್ರಾಮದಲ್ಲಿ ಸಂತಸಕ್ಕೆ ಕಾರಣವಾಗಿದೆ.

Leave a Reply

Your email address will not be published. Required fields are marked *