ರಂಗಭೂಮಿಗೆ ಮಹಿಳೆಯರ ಕೊಡುಗೆ ಅಪಾರ: ಪದ್ಮಶ್ರೀ ಪುರಸ್ಕೃತೆ ಬಿ.ಮಂಜಮ್ಮ ಜೋಗತಿ

ಬಳ್ಳಾರಿ: ರಂಗಭೂಮಿ ಹೂವಿನ ಹಾಸಿಗೆಯಲ್ಲ, ಹಲವು ಕಷ್ಟ- ನಷ್ಟಗಳ ಸುಳಿಯಲ್ಲೂ ತನ್ನ ಜೀವಂತಿಕೆಯನ್ನು ಕಾಪಾಡಿಕೊಂಡಿರುವ ರಂಗಭೂಮಿಗೆ ಮಹಿಳೆಯರ ಕೊಡುಗೆ ಅಪಾರ ಎಂದು ಖ್ಯಾತ ರಂಗಭೂಮಿ ಕಲಾವಿದೆ ಪದ್ಮಶ್ರೀ ಪುರಸ್ಕೃತೆ ಬಿ. ಮಂಜಮ್ಮ ಜೋಗತಿ ಹೇಳಿದರು.
ನಗರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಆವರಣದಲ್ಲಿ ಶ್ರೀ ಮಹಾದೇವ ತಾತ ಕಲಾ ಸಂಘ ಹಂದ್ಯಾಳು ಸಂಘದಿಂದ ಶನಿವಾರ ಆಯೋಜಿಸಿದ್ದ “ರಂಗಭೂಮಿಗೆ ಮಹಿಳೆಯರ ಕೊಡುಗೆ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಸಾಕಷ್ಟು ಸವಾಲುಗಳ ನಡುವೆ, ಆಧುನಿಕ ಭರಾಟೆಯಲ್ಲೂ ರಂಗಭೂಮಿ ತನ್ನ ಘನತೆಯನ್ನು ಉಳಿಸಿಕೊಂಡಿದೆ. ಈ ಹಿಂದೆ ರಂಗಭೂಮಿಗೆ ಸಾಕಷ್ಟು ಮಾನ್ಯತೆ ಇತ್ತು.ಆದರೆ ಯಾವಾಗ ಟಿವಿ, ಸಾಮಾಜಿಕ ಮಾಧ್ಯಮಗಳು ಪ್ರಭಲವಾದವೋ ಅಂದಿನಿಂದ ರಂಗಭೂಮಿಯ ಅಸ್ಥಿತ್ವಕ್ಕೆ ಧಕ್ಕೆ ಬಂತಲ್ಲಪ್ಪ ಅಂತ ಅನಿಸಿದ್ದು, ಸುಳ್ಳಲ್ಲ ಎಂದರು.
ಅನೇಕ ಸವಾಲುಗಳ ನಡುವೆ ರಂಗಭೂಮಿ ಇಲ್ಲಿಯವರೆಗೂ ಬೆಳೆದು ಬಂದಿದೆ.ಅನೇಕ ಮಹಿಳೆಯರು ರಂಗಭೂಮಿಗೆ ಬಹಳಷ್ಟು ಕೊಡುಗೆ ನೀಡಿದ್ದಾರೆ.ಬಳ್ಳಾರಿ ಜಿಲ್ಲೆಯಲ್ಲಿ ಡಾ.ಸುಭದ್ರಮ್ಮ ಮನ್ಸೂರು, ಡಾ. ಕೆ.ನಾಗರತ್ನಮ್ಮ, ವೀಣಾ ಆದೋನಿ ಸೇರಿದಂತೆ ನಾನಾ ಕಲಾವಿದರು ರಂಗಭೂಮಿಗೆ ಅದಮ್ಯ ಕೊಡುಗೆ ನೀಡಿದ್ದಾರೆ ಎಂದು ಪ್ರಶಂಸಿಸಿದರು.
ಪದ್ಮಶ್ರೀ ಪ್ರಶಸ್ತಿ ಇಡೀ ಬಳ್ಳಾರಿ ಜಿಲ್ಲೆಗೆ ಬಂದಿರುವಂತದ್ದು ಎಂದು ವಿನೀತರಾಗಿ ನುಡಿದ ಮಂಜಮ್ಮ, ನಾನು ಮಂಗಳಮುಖಿಯಾಗಿರಯವುದರಿಂದ ನನಗೆ ಮಕ್ಕಳಿಲ್ಲ, ಆದರೆ, ರಂಗಭೂಮಿ ಕಲೆ ನನಗೆ ಲಕ್ಷ, ಕೋಟಿ ಮಕ್ಕಳನ್ನು ನೀಡಿದೆ.ಇದಕ್ಕಿಂತ ಖುಷಿ ಸಂಗತಿ ನನಗೆ ಮತ್ತೊಂದಿಲ್ಲ ಎಂದು ಭಾವುಕರಾದರು.
ವಿದ್ಯಾರ್ಥಿಗಳು ಕೂಡ ರಂಗಭೂಮಿಯತ್ತ ಹೆಜ್ಜೆ ಇಡಬೇಕು.ಸಾಮಾಜಿಕ, ಪೌರಾಣಿಕ ನಾಟಕಗಳನ್ನು ನೋಡಬೇಕು.ಅಂದಾಗ ರಂಗಭೂಮಿ ಎಂದರೇ ಏನು ಎಂಬುದು ಅರ್ಥವಾಗುತ್ತದೆ ಎಂದರು.
ವಿದ್ಯಾರ್ಥಿಗಳು ಪ್ರಮುಖವಾಗಿ ಓದುವುದನ್ನು ರೂಢಿಸಿಕೊಳ್ಳಿ, ಮೊಬೈಲ್ ನಿಂದ ದೂರವಿರಿ.ಪಾಲಕರು ಕೂಡ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ಓದಿಸಿ, ಇದರಿಂದ ಸಂಸ್ಕೃತಿ, ಸಂಬಂಧ ಉಳಿಯುತ್ತದೆ. ಎಂದು ಹೇಳಿದರು.
ಉಪನ್ಯಾಸಕಿ ಡಾ.‌ಎನ್. ಸಿದ್ದೇಶ್ವರಿ ವಿಶೇಷಉಪನ್ಯಾಸ ನೀಡಿದರು.
.ಹಿರಿಯ ಉಪನ್ಯಾಸಕ ಶಾಮಣ್ಣ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ರಂಗಣ್ಣನವರ್, ಹಿರಿಯ ರಂಗಭೂಮಿ ಕಲಾವಿದರಾದ ವೀಣಾಕುಮಾರಿ, ಉಮಾರಾಣಿ ಇಲಕಲ್, ಉಪನ್ಯಾಸಕ ಚಾಂದಭಾಷಾ, ಡಾ.ಯು.ಆರ್.ಶ್ರೀನಿವಾಸಮೂರ್ತಿ ಸುಜಾತ, ಸನ್ಮಾರ್ಗ ಗೆಳೆಯರ ಬಳಗದ ಕಪಗಲ್ ಚಂದ್ರಶೇಖರ್ ಆಚಾರ್, , ಶ್ರೀ ಮಹಾದೇವ ತಾತ ಕಲಾ ಸಂಘ ಹಂದ್ಯಾಳು ಕಲಾ ಸಂಘದ ಅಧ್ಯಕ್ಷ ಪುರುಷೋತ್ತಮ ಹಂದ್ಯಾಳ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
———-

Leave a Reply

Your email address will not be published. Required fields are marked *