ರಾಜ್ಯ ಸರ್ಕಾರಿ ಕಚೇರಿ ವೇಳೆ ಬದಲಾವಣೆ: ಏ.12ರಿಂದ ಬೆಳಗ್ಗೆ 8ರಿಂದ ಮಧ್ಯಾಹ್ನ 1:30ರವರೆಗೆ

ಬಳ್ಳಾರಿ: ಪ್ರಸಕ್ತ ವರ್ಷದ ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಹೆಚ್ಚಾಗುವ ಬಿಸಿಲಿನ ತಾಪಮಾನದ ಹಿನ್ನೆಲೆಯಲ್ಲಿ ಬೆಳಗಾವಿ ವಿಭಾಗದ ವಿಜಯಪುರ, ಬಾಗಲಕೋಟೆ ಮತ್ತು ಕಲಬುರಗಿ ವಿಭಾಗದ ಏಳು ಜಿಲ್ಲೆಗಳಾದ ಬಳ್ಳಾರಿ, ವಿಜಯನಗರ, ಕಲಬುರಗಿ, ಬೀದರ್, ಯಾದಗಿರಿ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಏ.12ರಿಂದ ರಾಜ್ಯ ಸರಕಾರಿ ಕಚೇರಿಗಳ ಕೆಲಸದ ಕಾರ್ಯನಿರ್ವಹಣಾ ಸಮಯವನ್ನು ಬೆಳಿಗ್ಗೆ 8ರಿಂದ ಮಧ್ಯಾಹ್ನ 1:30ರವರೆಗೆ ಬದಲಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ.
ರಾಜ್ಯ ಸರಕಾರಿ ನೌಕರರ ಸಂಘದ ಕೋರಿಕೆಯ ಮೇರೆಗೆ ಸರಕಾರ ಈ ಆದೇಶ ಹೊರಡಿಸಲಾಗಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಅಧೀನ ಕಾರ್ಯದರ್ಶಿ ಬಿ.ಎಸ್.ರವಿಕುಮಾರ್ ಅವರು ತಿಳಿಸಿದ್ದಾರೆ.
ಈ ಜಿಲ್ಲೆಗಳಲ್ಲಿನ ಸರ್ಕಾರಿ ನೌಕರರು ಬದಲಾದ ಕಚೇರಿ ಸಮಯದಲ್ಲಿ ತಮ್ಮ ಕರ್ತವ್ಯಗಳನ್ನು ಸಾರ್ವಜನಿಕರಿಗೆ ತೊಂದರೆ ಉಂಟಾಗದಂತೆ ನಿರ್ವಹಿಸತಕ್ಕದ್ದು. ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತುರ್ತು ಕೆಲಸ ನಿರ್ವಹಿಸಲು ಸೂಚಿಸಿದ ಸಂದರ್ಭದಲ್ಲಿ (ವಿಶೇಷವಾಗಿ ಕೋವಿಡ್-19) ಕಚೇರಿ ಸಮಯ ಬದಲಾವಣೆ ಅನ್ವಯಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಸರಕಾರದ ಆದೇಶದ ಅನ್ವಯ ರಾಜ್ಯ ಸರಕಾರಿ ಕಚೇರಿಗಳು ಬಳ್ಳಾರಿ ಜಿಲ್ಲೆಯಲ್ಲಿಯೂ ಏ.12ರಿಂದ ಬೆಳಗ್ಗೆ 8ರಿಂದ‌ ಮಧ್ಯಾಹ್ನ1:30ರವರೆಗೆ ಕಾರ್ಯನಿರ್ವಹಿಸಲಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
*****

Leave a Reply

Your email address will not be published. Required fields are marked *