
ಬಳ್ಳಾರಿ, ನ.14 :ಪತ್ರಿಕಾ ಛಾಯಾಗ್ರಾಹಕ, ರಂಗ ಕಲಾವಿದ ಪುರುಷೋತ್ತಮ ಹಂದ್ಯಾಳ ಅವರು ಪತ್ರಿಕೋದ್ಯಮ ಹಾಗೂ ರಂಗಭೂಮಿಗೆ ಸಲ್ಲಿಸಿರುವ ಅನುಪಮ ಸೇವೆಯನ್ನು ರಾಜ್ಯ ಸರಕಾರ ಹಾಗೂ ಅಕಾಡೆಮಿಗಳು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಸಿ.ಮಂಜುನಾಥ್ ಒತ್ತಾಯಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬಳ್ಳಾರಿ ಜಿಲ್ಲಾ ಘಟಕದ ಕಾರ್ಯಕಾರಿಣಿ ಸದಸ್ಯರಾಗಿ ಚುನಾಯಿತರಾಗಿರುವ ಪುರುಷೋತ್ತಮ ಹಂದ್ಯಾಳು ಅವರನ್ನು ಗುರುವಾರ ಸಂಜೆ ರಂಗ ಕಲಾವಿದರು, ಸಂಘಟಕರು ಸನ್ಮಾನಿಸಿದ ಬಳಿಕ ಅವರು ಮಾತನಾಡಿದರು.
ಮೂರು ದಶಕಗಳಿಂದ ಕಲಾವಿದರಾಗಿ, ಸಂಘಟಕರಾಗಿ ರಂಗಭೂಮಿಗೆ ಹಾಗೂ ಎರಡು ದಶಕಗಳಿಂದ ಪತ್ರಿಕಾ ಛಾಯಾಗ್ರಾಹಕರಾಗಿ ಪತ್ರಿಕೋದ್ಯಮ, ಕೆಯುಡಬ್ಲ್ಯುಜೆ ಮತ್ತು ಗಿಲ್ಡ್ ಸದಸ್ಯ, ಪದಾಧಿಕಾರಿಯಾಗಿಯೂ ಪುರುಷೋತ್ತಮ ಅವರ ಸೇವೆ ಅನನ್ಯ ಎಂದು ಶ್ಲಾಘಿಸಿದರು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಿರಿಯ ರಂಗಕಲಾವಿದೆ ಉಮರಾಣಿ ಇಳಕಲ್, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ರಂಗ ನಟಿ ಲತಾ ಬಳ್ಳಾರಿ ಮತ್ತು ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ ಸಿ.ಮಂಜುನಾಥ್ ಅವರು ಪುರುಷೋತ್ತಮ ದಂಪತಿಗಳನ್ನು ಸತ್ಕರಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಛಾಯಾಗ್ರಾಹಕರಾದ
ಕೆ ಎಂ ವಿರುಪಾಕ್ಷಯ್ಯ, ಬಿ. ಮಂಜುನಾಥ, ಪೂಜಾ ಬಿ. ಮಂಜುನಾಥ ಮತ್ತು ಶಿಕ್ಷಕಿ ಸಾಯಿ ಶೃತಿ ಹಂದ್ಯಾಳು ಇದ್ದರು.
—–
