ಬಳ್ಳಾರಿ ಘರ್ಷಣೆ: ಮೃತ ರಾಜಶೇಖರ ರೆಡ್ಡಿ‌ ಕುಟುಂಬಕ್ಕೆ‌ 25 ಲಕ್ಷ ರೂ. ನೀಡಿ ಸಾಂತ್ವನ‌ ಹೇಳಿದ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್

 

ಬಳ್ಳಾರಿ: ಬ್ಯಾನರ್ ಕಟ್ಟುವ ವಿಚಾರದಲ್ಲಿ ಗುಂಪು ಘರ್ಷಣೆಯಲ್ಲಿ ಸಾವನ್ನಪ್ಪಿದ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ ರೆಡ್ಡಿ ಕುಟುಂಬಕ್ಕೆ ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ ಝೆಡ್ ಜಮೀರ್ ಅಹ್ಮದ್ ಖಾನ್ ಅವರು 25 ಲಕ್ಷ ರೂ. ಆರ್ಥಿಕ‌ ನೆರವು ನೀಡಿ ಸಾಂತ್ವನ ಹೇಳಿದರು.
ನಗರದ ಶಾಸಕ‌ನಾರಾ ಭರತ ರೆಡ್ಡಿ, ಕಂಪ್ಲಿ ಶಾಸಕ‌ ಜೆ‌ ಎನ್ ಗಣೇಶ್, ಡಿಸಿಸಿ ಅಧ್ಯಕ್ಷ ಅಲ್ಲಂ‌ ಪ್ರಶಾಂತ್ ಮತ್ತಿತರ‌ ಗಣ್ಯರೊಂದಿಗೆ ಹುಸೇನ್‌ ನಗರದಲ್ಲಿರುವ ರಾಜಶೇಖರ ರೆಡ್ಡಿ ಅವರ ಮನೆಗೆ ಶನಿವಾರ ಸಂಜೆ ತೆರಳಿ‌ ಜಮೀರ್ ಖಾನ್ ಅವರು ಕುಟುಂಬ ಸದಸ್ಯರಿಗೆ ಧೈರ್ಯ ತುಂಬಿದರು.
ನಿಮ್ಮ ಕುಟುಂಬದ ಜತೆ ಕಾಂಗ್ರೆಸ್ ಪಕ್ಷ, ಜಿಲ್ಲೆಯ ಎಲ್ಲಾ ಶಾಸಕರು ಇದ್ದಾರೆ ಎಂದು ‌ತಿಳಿಸಿದರು.
ಈ‌ ಸಂದರ್ಭದಲ್ಲಿ ರಾಜಶೇಖರ ಅವರ ತಾಯಿ, ತಮ್ಮ, ವಿಧವೆ ಅಕ್ಕ ಇದ್ದು ತಮ್ಮ ಕುಟುಂಬಕ್ಕೆ ಆಸರೆಯಾಗಿದ್ದ ರೆಡ್ಡಿಯನ್ನು‌ ಕಳೆದು ಕೊಂಡು ತೀರಾ ಸಂಕಷ್ಟದಲ್ಲಿದ್ದೇವೆ ಎಂದು ದುಃಖಿಸಿದರು.


ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ‌ ಸಚಿವ ಜಮೀರ್ ಅಹ್ಮದ್‌ಖಾನ್ ಅವರು, ರಾಜಶೇಖರ ‌ಕುಟುಂಬಕ್ಕೆ‌ ಆಧಾರವಾಗಿದ್ದರು. ಕುಟುಂಬ ಕಂಗಾಲಾಗಿ‌ ಹೋಗಿದೆ. ಈ‌ ನಿಟ್ಟಿನಲ್ಲಿ ಸರ್ಕಾರ ‌ಸೂಕ್ತ‌ ನೆರವು‌ ನೀಡಲಿದೆ. ಕೆಪಿಸಿಸಿ‌ ಅಧ್ಯಕ್ಷರೂ ನೆರವು ಘೋಷಿಸಲಿದ್ದಾರೆ.
ರಾಜಶೇಖರ ತಮ್ಮನಿಗೆ ಬಳ್ಳಾರಿ ಪಾಲಿಕೆಯಲ್ಲಿ ನೌಕರಿ ನೀಡಲಾಗುವುದು. ವಿಧವೆಯಾಗಿರುವ ಸಹೋದರಿಗೆ ಸ್ಲಮ್‌ ಬೋರ್ಡ್ ‌ನಿಂದ ಮನೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಗುಂಪು ಘರ್ಷಣೆಗೆ ಬಗ್ಗೆ ಮಾತನಾಡಿದ‌ ಸಚಿವರು ಮಹರ್ಷಿ ಶ್ರೀ ವಾಲ್ಮೀಕಿ ಪುತ್ಥಳಿ ‌ಅನಾವರಣ ಕಾರ್ಯಕ್ರಮದ ಹಿನ್ನಲೆಯಲ್ಲಿ ಅಭಿಮಾನಿಗಳು ಬ್ಯಾನರ್ ಕಟ್ಟಿ ಸಂಭ್ರಮ ಪಡುತ್ತಿದ್ದರು. ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ದೊಡ್ಡ ಮನಸ್ಸು ಮಾಡಿ ನಿರ್ಲಕ್ಷಿಸಿದ್ದರೆ ಘರ್ಷಣೆ ಯಾಗುತ್ತಿರಲಿಲ್ಲ ಎಂದು ಅಭಿಪ್ರಾಯ ಪಟ್ಟರು.
ಬಹಳ ವರ್ಷಗಳ ಕನಸು ‌ನನಸಾಗುತ್ತಿರುವದರಿಂದ
ಕಾರ್ಯಕ್ರಮಕ್ಕೆ ಶ್ರೀ ರಾಮುಲು‌ ಮತ್ತು ಜನಾರ್ದನ ರೆಡ್ಡಿ ಬೆಂಬಲ‌ ನೀಡ ಬೇಕಿತ್ತು ಎಂದರು.
ಎಸ್.ಪಿ ಪವನ್ ನೆಜ್ಜೂರು ಅವರ ಅಮಾನತ್ತನ್ನು‌ ಸಚಿವರು ಸಮರ್ಥಿಸಿ ಕೊಂಡರು. ಜವಾಬ್ದಾರಿಯುತ ಸ್ಥಾನದಲ್ಲಿರುವ ಎಸ್ಪಿ ಚಾರ್ಜ್ ತೆಗೆದುಕೊಂಡು ಗಂಟೆಗಳಲ್ಲಿ ಕರ್ತವ್ಯ‌ ನಿರ್ವಹಿಸಬೇಕು. ಸೂಕ್ಷ್ಮ ಸನ್ನಿವೇಶವಿದ್ದಾಗ‌ ನಿರ್ಲಕ್ಷ ಸರಿಯಲ್ಲ ಎಂದರು.
ಈ ಸಂದರ್ಭದಲ್ಲಿ ಶಾಸಕರಾದ ನಾರಾ‌ ಭರತ ರೆಡ್ಡಿ, ಜೆ ಎನ್ ಗಣೇಶ್, ಡಿಸಿಸಿ ಅಧ್ಯಕ್ಷ ಅಲ್ಲಂ‌ ಪ್ರಶಾಂತ್ ಮತ್ತಿತರ ಗಣ್ಯರು‌ ಇದ್ದರು.
—–