
ಬಳ್ಳಾರಿ, ಜ.14: ವಿದ್ಯಾರ್ಥಿಗಳ ಮಾನಸಿಕ ಬೆಳವಣಿಗೆಯಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ಪಾತ್ರ ಅನನ್ಯ ಎಂದು ಹಿರಿಯ ರಂಗ ಕಲಾವಿದ ಪುರುಷೋತ್ತಮ ಹಂದ್ಯಾಳ್ ಹೇಳಿದರು.
ತಾಲ್ಲೂಕಿನ ಸಂಜೀವರಾಯನಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಕನ್ನಡ ತಾಯಿ ಭುವನೇಶ್ವರಿ ಮೆರವಣಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳು ಕೂಡ ಅವಶ್ಯಕ. ನೃತ್ಯ, ಅಭಿನಯ,ಗಾಯನದಂತಹ ಸಾಂಸ್ಕೃತಿಕ ಚಟುವಟಿಕೆಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಾಯವಾಗುತ್ತವೆ ಎಂದು ಅಭಿಪ್ರಾಯ ಪಟ್ಟರು.
ನೈತಿಕ ಮೌಲ್ಯಗಳು ಕುಸಿಯುತ್ತಿರುವ ಕಾಲ ಘಟ್ಟದಲ್ಲಿ ನಾವಿದ್ದೇವೆ. ಇಂತಹ ಸಂದರ್ಭದಲ್ಲಿ ಮಕ್ಕಳಲ್ಲಿ ನೈತಿಕತೆ ಮೂಡಿಸಿ, ಅವರನ್ನು ಉತ್ತಮ ಪ್ರಜೆಗಳನ್ನಾಗಿ ತಿದ್ದಿ ತೀಡುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.
ಪೋಷಕರು ಮತ್ತು ಸಮಾಜ ಶಿಕ್ಷಕರಿಗೆ ಬೆನ್ನೆಲುಬಾಗಿ ನಿಲ್ಲಬೇಕು. ಅವರು ತೆಗೆದು ಕೊಳ್ಳುವ ಒಳ್ಳೆಯ ತೀರ್ಮಾನಗಳನ್ನು ಬೆಂಬಲಿಸಬೇಕು ಗೌರವಿಸಬೇಕು ಎಂದು ತಿಳಿಸಿದರು.
ಕನ್ನಡ ಪರ ಚಟುವಟಿಕೆಗಳು ಹೆಚ್ಚಾಗಿ ತಾಲ್ಲೂಕಿನ ಕಪ್ಪಗಲ್ಲು ಗ್ರಾಮದಲ್ಲಿ ನಡೆಯುತ್ತಿದ್ದವು. ಇದೀಗ ಸಂಜೀವರಾಯನಕೋಟೆಯೂ ಸೇರಿಕೊಂಡಿದ್ದು ಪ್ರಶಂಸನೀಯ ಎಂದು ಕೊಂಡಾಡಿದರು.
ಮೆರವಣಿಗೆ: ಬೆಳಿಗ್ಗೆ ಕನ್ನಡ ತಾಯಿ ಭುವನೇಶ್ವರಿಗೆ ಪೂಜೆ ನೆರೆವೇರಿಸಿದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಬಸಮ್ಮ ಕನ್ನಡ ಧ್ವಜ ಹಿಡಿದು101 ಪೂರ್ಣಕುಂಬಕ್ಕೆ ಚಾಲನೆ ನೀಡಿದರು.

ಮೆರವಣಿಗೆ ಗ್ರಾಮದ ಎಲ್ಲಾ ಓಣಿಗಳಲ್ಲಿ ಸಂಚರಿಸಿತು.
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ, ಜಗಜ್ಯೋತಿ ಬಸವಣ್ಣ, ಶಿವಶರಣೆ ಅಕ್ಕಮಹಾದೇವಿ, ದಾಸಶ್ರೇಷ್ಠ ಭಕ್ತ ಕನಕದಾಸ,ಬಾಬಾ ಸಾಹೇಬ್ ಅಂಬೇಡ್ಕರ್, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಹಾಗೂ ರಾಷ್ಟ್ರ ಕವಿಗಳ ಸ್ತಬ್ಧ ಚಿತ್ರಗಳು ನೋಡುಗರ ಕಣ್ಮನ ಸೆಳೆದವು.

ಸನ್ಮಾನ: ಇದೇ ಸಂದರ್ಭದಲ್ಲಿ ಪುರುಷೋತ್ತಮ ಹಂದ್ಯಾಳ್ ಸೇರಿದಂತೆ ಹಲವು ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಗ್ರಾಮದ ಜಗಲಿ ದೇವರಾಜ, ಕಾವಲಿ ಹೊನ್ನೂರಪ್ಪ, ಹೊನ್ನೂರಸ್ವಾಮಿ,ಕೆ.ಪಿ.ಸುಂಕಣ್ಣ, ಗ್ರಂಥಾಲಯ ಸಿಬ್ಬಂದಿ ಕೆ.ಸಿದ್ದಪ್ಪ,ನಾಗೇಂದ್ರ, ಗಂಗಾಧರ, ಜಿ.ಗಂಗಾಧರ, ನಾಗರಾಜ,ಶ್ರೀಕಾಂತ್, ವಿಜಯ, ಅಮರೇಶ ಗೌಡ,ಸುಂಕಪ್ಪ, ಶಿಕ್ಷಕರಾದ ಬೆಣಕಲ್ ಬಸಪ್ಪ, ಹಲಕುಂದಿ ಕ್ಲಸ್ಟರ್ ಸಿ.ಆರ್. ಪಿ ಶ್ರೀನಿವಾಸ ,ಚೆನ್ನಮ್ಮ, ಕೆಂಚಪ್ಪ, ಸುಮತಿ, ನಾಗಪ್ಪ, ವೈಶಾಲಿ, ಉಮ್ಮೆಹಾನಿ,ಶಶಮ್ಮ ಜೀತೇಶ್ವರಿ,ಗುರು ಪ್ರಸಾದ್, ಸುಮ,ಮಹೇಶ್ ಹಾಗೂ ವಿದ್ಯಾರ್ಥಿ ಪ್ರತಿನಿಧಿ ಎನ್. ಪ್ರದೀಪ್ ಆಶಾಕಾರ್ಯಕರ್ತೆಯರು,ವಿವಿಧ ಸಂಘಟನೆಗಳು ಹಾಗೂ ಮಹಿಳಾ ಸಂಘಟನೆಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರಗು ತಂದರು ಊರಿನ ಹಿರಿಯರು ಮುಖಂಡರು ಉಪಸ್ಥಿತರಿದ್ದರು.
ಶಾಲೆಯ ಪ್ರಭಾರಿ ಮುಖ್ಯಗುರುಗಳಾದ ರವಿ ಚೇಳ್ಳಗುರ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಶೇಷಮ್ಮ ಸ್ವಾಗತಿಸಿದರು. ಶಿಕ್ಷಕ ಗುರು ಪ್ರಸಾದ್ ವಂದಿಸಿದರು. ನಂತರ ನಡೆದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಸಭಿಕರ ಮನ ಸೆಳೆದವು..
