ಬೆಂಗಳೂರು, ಸೆ.1:ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿರುವ ರಂಗಕರ್ಮಿ ಹಾಗೂ ಹಿರಿಯ ಪತ್ರಕರ್ತ ಶಿವಾನಂದ ತಗಡೂರು ಅವರನ್ನು ಹತ್ತು ಸಾವಿರ ಪತ್ರಕರ್ತರ ಸಾಂಘಿಕ ಶಕ್ತಿಯಾಗಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಭಾವಪೂರ್ಣವಾಗಿ ಅಭಿನಂದಿಸಿತು.
ಸೋಮವಾರ ನಗರದ ಕಂದಾಯ ಭವನದಲ್ಲಿರುವ ಡಿವಿಜಿ ಸಭಾಂಗಣದಲ್ಲಿ ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಶಿವಾನಂದ ತಗಡೂರು ಅವರಿಗೆ ಅಭಿನಂದನೆ ಸಲ್ಲಿಸುವುದರ ಜೊತೆಗೆ, ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ ಕರ್ನಾಟಕ ನಾಟಕ ಅಕಾಡೆಮಿಗೂ ಅಭಿನಂದನೆ ಸೂಚಿಸುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.
ಬಳಿಕ ನಡೆದ ಅಭಿನಂದನಾ ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಎನ್. ರವಿಕುಮಾರ್ (ಟೆಲೆಕ್ಸ್) ಮಾತನಾಡಿ, “ಶಿವಾನಂದ ತಗಡೂರು ಅವರನ್ನು ಬಹುತೇಕರು ಪತ್ರಕರ್ತರಾಗಿ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾಗಿ ಮಾತ್ರ ಗುರುತಿಸುತ್ತಾರೆ. ಆದರೆ ಅವರೊಳಗೆ ಬದುಕಿರುವ ಸಮರ್ಪಿತ ರಂಗಕಲಾವಿದನನ್ನು ಅಷ್ಟಾಗಿ ಅರಿತಿಲ್ಲ,” ಎಂದು ಹೇಳಿದರು.
“ಶಿವಾನಂದ ತಗಡೂರು ಪತ್ರಿಕೋದ್ಯಮಕ್ಕೆ ಬರುವ ಮುನ್ನವೇ ಜನಪರ ಚಳವಳಿಗಳ ಸಕ್ರಿಯ ಭಾಗವಾಗಿದ್ದರು. ರೈತ ಚಳವಳಿ, ಬಾಗೂರು-ನವಿಲೆ ಹೋರಾಟ ಸೇರಿದಂತೆ ಅನೇಕ ಜನಾಂದೋಲನಗಳಲ್ಲಿ ಹೆಜ್ಜೆ ಹಾಕಿದ ಅವರು, ಸಾಮಾಜಿಕ ಪರಿವರ್ತನೆಗಾಗಿ ರಂಗಭೂಮಿಯನ್ನು ಪರಿಣಾಮಕಾರಿ ಮಾಧ್ಯಮವನ್ನಾಗಿ ಬಳಸಿಕೊಂಡವರು,” ಎಂದು ಅವರು ಸ್ಮರಿಸಿದರು.
ಪರದೆ ಮುಂದೆ ಮತ್ತು ಪರದೆ ಹಿಂದೆ ಸಮಾನವಾಗಿ ದುಡಿದಿರುವ ಶಿವಾನಂದ ತಗಡೂರು ಬಹುಮುಖ ಪ್ರತಿಭೆಯ ವ್ಯಕ್ತಿತ್ವ ಹೊಂದಿದ್ದಾರೆ. ತಮ್ಮ ಪ್ರತಿಭೆಯನ್ನು ಸಮಾಜದ ಒಳಿತಿಗೆ ಮುಡುಪಾಗಿಟ್ಟಿರುವ ಅವರ ಬದುಕು ರಂಗಭೂಮಿಯ ಮೇಲಿನ ಬದ್ಧತೆ, ನಿಷ್ಠೆ ಮತ್ತು ಸೇವೆಯ ಪ್ರತೀಕವಾಗಿದೆ. ಇಂತಹ ಸೇವೆಯನ್ನು ಗುರುತಿಸಿ ನಾಟಕ ಅಕಾಡೆಮಿ ಪ್ರಶಸ್ತಿ ನೀಡಿರುವುದು ಅತ್ಯಂತ ಸಾರ್ಥಕವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
“ಈ ಪ್ರಶಸ್ತಿ ವೈಯಕ್ತಿಕವಾಗಿ ಶಿವಾನಂದ ತಗಡೂರು ಅವರಿಗೆ ಸಂದ ಗೌರವ ಮಾತ್ರವಲ್ಲ, ರಾಜ್ಯದ ಎಲ್ಲ ಕಾರ್ಯನಿರತ ಪತ್ರಕರ್ತರಿಗೆ ಸಂದಿರುವ ಗೌರವವೂ ಹೌದು. ಇದರಿಂದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಘನತೆ ಮತ್ತಷ್ಟು ಹೆಚ್ಚಿದೆ. ಈ ಗೌರವ ನೀಡಿದ ಕರ್ನಾಟಕ ನಾಟಕ ಅಕಾಡೆಮಿಗೆ ಕೆಯುಡಬ್ಲ್ಯುಜೆ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ,” ಎಂದು ಎನ್. ರವಿಕುಮಾರ್ ಹೇಳಿದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯ ಪತ್ರಕರ್ತರು ಶಿವಾನಂದ ತಗಡೂರು ಅವರನ್ನು ಅಭಿನಂದಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಂಘದ ಹಿರಿಯ ಉಪಾಧ್ಯಕ್ಷ ಹೆಚ್. ಬಿ. ಮದನಗೌಡ ಮಾತನಾಡಿ ಎಂದೋ ಬರಬೇಕಾಗಿದ್ದ ಇಂದು ಬಂದಿದೆ. ಇದು ಸಂಘಕ್ಕೊಂದು ಗರಿಮೆ ಎಂದರು.
ರಾಜ್ಯ ಉಪಾಧ್ಯಕ್ಷರಾದ ಮತ್ತಿಕೆರೆ ಜಯರಾಮ್ , ರಮೇಶ್ ಅಜ್ಜಮಾಡ ಕುಟ್ಟಪ್ಪ, ಪ್ರಧಾನ ಕಾರ್ಯದರ್ಶಿ ಜಿ. ಸಿ. ಲೋಕೇಶ, ಕಾರ್ಯದರ್ಶಿಗಳಾದ ಸೋಮಶೇಖರ ಕೆರಗೋಡು, ನಿಂಗಪ್ಪ ಚಾವಡಿ, ಪುಂಡಲೀಕ ಬಾಳೋಜಿ, ಖಜಾಂಚಿ ವಾಸುದೇವ ಹೊಳ್ಳ ಸೇರಿದಂತೆ ರಾಜ್ಯ ಕಾರ್ಯಕಾರಿಣಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
