ವಟವಟ ಮಾತನಾಡುತ್ತಿದ್ದೆ ಆದರೆ ಬದುಕು ಮೌನವಾಗಿರಲು ಕಲಿಸಿತು!
ತುಂಬಾ ನಕ್ತಿದ್ದೆ ಆದ್ರೆ ಬದುಕು ಬರುಬರುತ್ತಾ ಅಳುವುದನ್ನು ಕಲಿಸ್ತು!
ತುಂಬಾ ಕನಸುಗಳನ್ನು ಹೊತ್ತಿದ್ದೆ, ಬದುಕು ಅದೊಂದು ಭ್ರಮೆ ಎಂದು ವ್ಯಂಗದ ನಗೆ ನಕ್ಕಿತು! ಆತ್ಮೀಯಯರ ಜೊತೆಗೆ ಅತಿಯಾಗಿ ಬೆರೆಯುವ ಮನಸ್ಥಿತಿಯವಳಾಗಿದ್ದೆ, ತಿಂದ ನೋವು ಒಂಟಿಯಾಗಿರಲು ಕಲಿಸಿತು,
ಪ್ರಪಂಚವೇ ಎಲ್ಲಾ ರೀತಿಯ ಪಾಠವನ್ನು ಕಲಿಸಲು ಮುಂದಾಯಿತು!!
ಇದರಿಂದಾಗಿ ಒಂದು ಸಮಯಕ್ಕೆ ಅನ್ಯರು ಮುಗ್ಧತೆಯನ್ನು ಬಳಸಿಕೊಳ್ಳುತ್ತಾರೆ ಅಂತ ಅರಿವಾಯ್ತು!
ಬೆನ್ನ ಹಿಂದೆ ನನ್ನವರೇ ನನ್ನನ್ನು ಹೀಯಾಳಿಸಿ ನಗ್ತಾರೆ ಅಂತ ನೋವಾಯ್ತು!
ಸ್ವಂತದವರ ಬದುಕಿನಲ್ಲಿ ನನ್ನ ಸ್ಥಾನ ಎಲ್ಲಿದೆ ಎಂದು ತಿಳಿದು ಅತೀವ ವೇದನೆಯಾಯ್ತು!
ಇವರೆಲ್ಲ ನನ್ನವರು ನನ್ನ ಸ್ವಂತದವರು ಎಂದು ನಾ ಪಟ್ಟ ಹೆಮ್ಮೆಯೇ ನನಗೆ ಧಕ್ಕೆ ಕೊಡ್ತು!
ನನ್ನ ಸ್ವಂತದವರೆಂದರೆ ಯಾರು ಎನ್ನುವ ಪ್ರಶ್ನೆ ಬದುಕು ತಂದು ನನ್ನ ಮುಂದಿಟ್ಟಿತು!
ರಕ್ತ ಸಂಬಂಧವೇ, ಬೆಸೆದ ಬಾಂಧವ್ಯವೇ!?
ಈ ಪ್ರಶ್ನೆ ಅಂತರಂಗಕ್ಕೆ ಕೇಳಿದರೆ ಅದು ಮಾತನಾಡಲಿಲ್ಲ!
ಒಳ್ಳೆಯ ಮಾತಿಗೆ ಬೆಲೆಯಿಲ್ಲ, ಬದುಕಲು ನಾಟಕೀಯ ಮಾತೇ ಸರಿ ಎನ್ನುವ ಪರಿ ತಿಳಿದು ಆಶ್ಚರ್ಯವಾಯ್ತು! ನನ್ನ ಸ್ವಂತದವರು ಎನ್ನುವ ಅಭಿಮಾನದಿಂದ ನಾ ಹೇಳಿದ ನನ್ನ ಮನೋವೇದನೆ ನನಗೆ ಗೊತ್ತಿಲ್ಲದಂತೆ ಬಳಕೆಯಾಯ್ತು!
ಒಂದು ಸಮಯದಲ್ಲಿ ಕಣ್ತುಂಬ ನಿದ್ದೆ ಮಾಡ್ತಿದ್ದೆ, ಬದುಕಿನ ಚಿಂತೆ ನೆಮ್ಮದಿಯ ಆ ನಿದ್ದೆಯನ್ನೇ ಮರೆಸಿತು!
ಹುಚ್ಚಿ ,,,,ಎಲ್ಲರೂ ನನ್ನವರು ಎನ್ನುವ ನಿನ್ನ ಅಭಿಪ್ರಾಯವೇ ತಪ್ಪು ಎಂದು ಬದುಕು ತನ್ನ ಪಾಠ ಹೇಳಿ ಕೊಡ್ತು!
ನನ್ನವರೆನ್ನುವವರು ಹೇಳುವ ಸುಳ್ಳಿನ ಕಂತೆಗೆ, ಮಾತಿಗೆ ಹುಸಿ ನಗೆ ನಕ್ಕೆ! ಆದರೂ ನನ್ನವರು, ಸ್ವಂತದವರನ್ನು ಬಿಟ್ಟು ಕೊಡಲು ಕಷ್ಟವೆನಿಸಿ, ಎಲ್ಲರ ಜೊತೆಗೆ ನಗುನಗುತ್ತಲೇ ಇದ್ದೆ! ನೋವನ್ನು ಒಂದೊಂದೇ ಗುಟುಕಿನಂತೆ ನುಂಗುತ್ತಲೇ ಗೆದ್ದೆ!
ನನ್ನಲ್ಲಿ ತುಸು ಬೇಸರ, ಸಿಟ್ಟಿದೆ ನಿಜ, ಆದರೆ ನಾನು ನನ್ನ ಪ್ರಾಣ ಹೋದರೂ ದ್ವೇಷ ಎನ್ನುವ ಅಗ್ನಿ ಕುಂಡದಲ್ಲಿ ಬೀಳುವುದಿಲ್ಲ ಅದೊಂದು ಸಜಾ! ಯಾರನ್ನೂ ದ್ವೇಷಿಸುವುದಿಲ್ಲ ಎನ್ನುವ ನನ್ನ ಅಂತರಂಗದ ನಿರ್ಧಾರಕ್ಕೆ ಬದ್ಧಳಾಗಿದ್ದೇನೆ ಅದು ಅಪ್ಪಟ ನಿಜಾ !
ಎಷ್ಟೋ ನೋವು, ವೇದನೆ, ಕಣ್ಣೀರು ಇವೆಲ್ಲವನ್ನೂ ನುಂಗಿ ನೀರು ಕುಡಿದರೂ ಏನೂ ಆಗೇ ಇಲ್ಲವೆಂಬ ನಾಟಕೀಯ ನಗು ಮುಖ ಹೊತ್ತು ಪ್ರಪಂಚದಲ್ಲಿ ಆತ್ಮೀಯತೆ, ಬಾಂಧವ್ಯ ಎಷ್ಟು ಸುಂದರ, ಚೆಂದ ಎಂದು ಹೇಳುತ್ತಲೇ ಬಂದೆ, ಮುಂದೆಯೂ ಹಾಗೆ ಹೇಳುತ್ತಲೇ ಇರುತ್ತೇನೆ!
ಈ ಸಕಾರಾತ್ಮಕ ವಿಚಾರವೇ ಮುಂದೊಂದು ದಿನ ನಿಜವಾಗಿಯೂ ಎಲ್ಲಾ ಸಂಬಂಧಗಳನ್ನು , ಬಾಂಧವ್ಯಗಳನ್ನು ಸುಂದರವಾಗಿಸಬಲ್ಲವು, ಅರ್ಥ ಕೊಡಬಲ್ಲವು ಎನ್ನುವ ಈ ಆಶಾಭಾವನೆಯಲ್ಲಿರುವ ಎಲ್ಲರ ಪರವಾಗಿ ನಾನು ಇಲ್ಲಿ ನನ್ನ ಆಶಯವನ್ನೂ ಹೊತ್ತು ಹೇಳುತ್ತಿದ್ದೇನೆ! ನಿಜವಲ್ಲವೇ!!?
(ಎಷ್ಟೋ ಮನಗಳ ಮಾತು , ಆ ಭಾವನೆಗೆ ಬಣ್ಣ ಕೊಟ್ಟಿದ್ದೇನೆ ಅಷ್ಟೇ!)

-ಸ್ನೇಹಾ ಆನಂದ್, ಬೆಂಗಳೂರು 🌻
