ಅನುದಿನ ಕವನ-೧೬೦, ಕವಿ: ದೇವರಾಜ್ ಹುಣಸೀಕಟ್ಟೆ, ರಾಣೇಬೆನ್ನೂರು, ಕವನದ ಶೀರ್ಷಿಕೆ: ಪ್ರೀತಿ 💙

💐ಪ್ರೀತಿ 💐

ಪ್ರೀತಿ ಅಂದ್ರ್…..
ನಿನ್ನ ಅದಾಕ್ಕ ಫಿದಾ ಆಗಿ
ಮದಾ ಬಂದ್ ನಿನ್ನ ಜೊತಿ
ಸದಾ ಇರತೀನಿ ಖುದ್ದು ಆ
ಖುದಾನ ಕರೆ ಬರೋವರೆಗೂ
ಅಂದಿದ್ದೇನಲ್ಲ ಅದಾ……

ಪ್ರೀತಿ ಅಂದ್ರ್……
ಯಾಕಿಷ್ಟು ಕಾಡತಿ
ನೆನಪಿನಂಗಳಕೆ ಬಂದು….
ಚೆಂದನದ ವದನವ
ಕಂಗಳಲಿ ತುಂಬಿ ನಿಂದು….
ಎಂದು ಅಲವತ್ತಕೊಂಡು…
ಒಮ್ಮೊಮ್ಮೆ ದುತ್ತನೆ ನನ್ನನ್ನೆ ನಾನು
ಸುಖಾ-ಸುಮ್ಮನೆ ಕಳೆದುಕೊಳ್ಳೊ ಹಾಗೆ…
ತುಂಟು ನಗು ತುಟಿ ಅಂಚಲಿ
ಹೊರಳೋ ಹಾಗೆ ಮಾಡಿಬಿಟ್ಟಿದೆಲ್ಲಾ ಅದಾ…..

ಪ್ರೀತಿ ಅಂದ್ರ್ ….
ಈ ಕಂಗಳು ಮಾಡಿದ ಸಂಚಿಗೆ
ಇಂಚಿಂಚು ನನ್ನ ನಿನ್ನೊಳಗೆ ಕರಗಿಸಿ
ನಾ ಮುಡಿದ ಭಾವಗಳ ನೀ ಹಡೆದು
ನನ್ನ ಒಲವಿನೊರತೆ ಕುಡಿದು
ಮಾಗಿ ಮಳೆಯ ಇಂಚಿಂಚು
ತುಂಬಿಕೊಂಡಿಯಲ್ಲಾ ಅದಾ…..

ಪ್ರೀತಿ ಅಂದ್ರ್…..
ಬಾನಂಗಳದ ಚೆಲುವನೆಲ್ಲ
ನನ್ನ ಎದೆಯಂಗಳಕೆ ಹರಡಿ…
ಸುಖಾ ಸುಮ್ಮನೆ ಸಣ್ಣಗೆ
ಎಳೆ-ಎಳೆಯಾಗಿ ಉಸಿರಲ್ಲಿ
ತುಂಬಿ ಕೊಂಡು ಚಿತ್ತ ಕದಡಿ….
ಸಾಗಿದಷ್ಟು ದೂರ ಹೆಜ್ಜೆ ಗುರುತುಗಳ
ಮಿದುವಾಗಿ ಹದವಾಗಿ ಒತ್ತಿ ಬಿಟ್ಟಿದ್ದೆಲ್ಲ ಅದಾ…….

ಪ್ರೀತಿ ಅಂದ್ರ್…..
ನಾನು-ನೀನು ಎಲ್ಲೆಗಳ ಮೀರಿ
ಬಲ್ಲವರು ಒಪ್ಪದ ದಾರಿಗೆ ಸಾಗಿ
ದಿನ ದಿನವು ಪ್ರೀತಿಯಲಿ ಮಾಗಿ
ಭಾವಾಂತರಂಗದ ನಾದವಾಗಿ
ಚೆಲ್ಲಿದ ಬೆಳದಿಂಗಳ ಹಾಗೆ
ಕಂಗಳಲ್ಲೇ ಲಕ್ಷ ಜಲಧಾರೆಗಳ
ನಗುವ ತುಂಬಿಕೊಂಡ ಹಾಗೆ
ಮಾಯೆಯಾಗಿದ್ದೆಲ್ಲ ಅದಾ…

ನಾನು ನಾನಾಗಿರುವಾಗ
ನೀ ನಾನಾಗುವ ಹಾಗೆ…
ಅಕ್ಷರಗಳಲಿ ಅರಳಿ
ಕವಿತೆಯಾಗುವ ಹಾಗೆ …
ಮತ್ತೆ -ಮತ್ತೆ ನಿರ್ಮಲ ಆನಂದ
ತುಂಬುವ ಧ್ಯಾನದ ಹಾಗೆ….
ನನ್ನೊಳಗೆ ಇಳಿದು ಬಿಟ್ಟೆಯಲ್ಲ ಅದಾ…….

ಪ್ರೀತಿ ಅಂದ್ರ್……
ನಿಶ್ಚಲವಾಗಿದ್ದ ಮನದಲ್ಲಿ
ಕ್ಷಣ ಕ್ಷಣವು ಕಷ್ಟವೇ
ನಿನ್ನ ಹೊರತು ಎನ್ನುವ ಹಾಗೆ…
ಇರಲಾರೆನು ನಿನ್ನ ಅರೆಕ್ಷಣ
ಮರೆತು ಎನ್ನುವ ಹಾಗೆ…
ಆವರಿಸಿ ಬಿಟ್ಟಿದ್ದೆಲ್ಲ ಅದಾ……

ಪ್ರೀತಿ ಅಂದ್ರ್ ಏನ್ ಅಂತಾ ಗೊತ್ತಿಲ್ಲ ನೋಡ್ರಿ…..
ಬರೀ ನಾನು ಅವಳು ಒಬ್ಬರಿಗೊಬ್ಬರು
ಮುತ್ತಾಗಿ ಸ್ವತ್ತಾಗಿ ಒಬ್ಬರೊಳಗ
ಇನ್ನೊಬ್ಬರ ಬಿತ್ತಿ ಬಿಟ್ಟಿವಿ……
ಈ ಪ್ರೀತಿ ಅಂದ್ರ್ ಏನ್ ಅಂದು
ತಿಳಿದವರು ಹೇಳ್ ಬೇಕ್ ನಾವು ಕೇಳಬೇಕ್….

– ದೇವರಾಜ್ ಹುಣಸಿಕಟ್ಟಿ.
ಶಿಕ್ಷಕರು. ರಾಣೇಬೆನ್ನೂರ್.

Leave a Reply

Your email address will not be published. Required fields are marked *