ಮೌನವೆಂದರೆ ನಾನು…
ನನ್ನಲ್ಲಿರುವ ಪದಗಳೆಲ್ಲವೂ
ಎಂಜಲಿನವು.
ನನ್ನದು ಎನ್ನುವ ಒಂದೇ ಒಂದು ಪದ
ನನ್ನಲ್ಲಿಲ್ಲ.
ಮೌನ ಮಾತ್ರ
ನನ್ನದು; ನನ್ನೊಳಗಿನದ್ದು
ನನ್ನ ಜೊತೆ
ಯಾವಾಗಲೂ ಇರುವಂಥದ್ದು;
ಪದಗಳು
ಬೆಳಕಿನ ಹಾಗೆ ಬದಲಾಗುತ್ತವೆ
ಹೊಸ ಕನಸು ಹೊಸ ರೆಕ್ಕೆ, ಮೋಹಕ-
ಕಣ್ಣು ಅವಕ್ಕೆ.
ಮೌನ ಕತ್ತಲಿನ ಹಾಗೆ,
ಹೋಲಿಕೆ ಇಲ್ಲದ್ದು.
ಮಾತಿನ ಸಾಲುಗಳ ನಡುವೆ
ಇರುವ ಜಾಗ.

-ಎಂ ಎಸ್ ರುದ್ರೇಶ್ವರಸ್ವಾಮಿ, ಬೆಂಗಳೂರು
