
ಬಳ್ಳಾರಿ, ಆ.22: ಈ ನೆಲದ ಸಂಸ್ಕೃತಿ ಪರಂಪರೆಯೇ ಜಾನಪದ ಎಂದು ತುಂಗ ಗಂಗಾ ಕಲಾ ಟ್ರಸ್ಟ್ ನ ಅಧ್ಯಕ್ಷರೂ ರಂಗ ಕಲಾವಿದರಾದ ನಾಗಭೂಷಣ್ ಅವರು ಹೇಳಿದರು.
ನಗರದ ಸತ್ಯನಾರಾಯಣ ಪೇಟೆಯ ಶ್ರೀ ಕೃಷ್ಣ ಪ್ಲಾಜಾ ಸಭಾಂಗಣದಲ್ಲಿ ಸಂಗನಕಲ್ಲು ವೀಣಾಶ್ರೀ ಮಹಿಳಾ ಕಲಾ ಸಂಘ ಭಾನುವಾರ ಹಮ್ಮಿಕೊಂಡಿದ್ದ ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ರಕೃತಿಯೊಂದಿಗೆ ನೇರ ಸಂಬಂಧ ಹೊಂದಿರುವ ಗ್ರಾಮೀಣ ಶೈಲಿಯ ಬದುಕು ಜಾನಪದದ ಜೀವಾಳವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ತೊಗಲುಗೊಂಬೆ ಕಲಾವಿದ ಸುಬ್ಬಣ್ಣ ಮಾತನಾಡಿ, ಕರ್ನಾಟಕ ಜಾನಪದಕ್ಕೆ ಸುದೀರ್ಘ ಮತ್ತು ಶ್ರೀಮಂತ ಇತಿಹಾಸವಿದೆ ಎಂದು ಹೇಳಿದರು.
1836 ರ ಆಗಸ್ಟ್ 22 ರಂದು ಬ್ರಿಟಿಷ್ ಬರಹಗಾರನಾದ ‘ವಿಲಿಯಂ ಜಾನ್ ಥಾಮ್ಸ್’ ಅವರು ಮೊದಲ ಬಾರಿಗೆ “ಫೋಲ್ಕ್-ಲೋರ್” ಅಂದರೆ ‘ಜಾನಪದ’ ಎಂಬ ಪದವನ್ನು ಬಳಸಿದರು. ಈ ನೆನಪಿಗಾಗಿ ಪ್ರತಿವರ್ಷ ಆಗಸ್ಟ್ 22 ರಂದು ವಿಶ್ವ ಜಾನಪದ ದಿನವನ್ನು ಆಚರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಜಾನಪದ ಗೀತೆಗಳು, ಕುಣಿತಗಳು, ಕಥೆಗಳು ಮತ್ತು ಆಚಾರ-ವಿಚಾರಗಳನ್ನು ವಿಶೇಷವಾಗಿ ಅಳಿವಿನ ಅಂಚಿನಲ್ಲಿರುವ ತೊಗಲುಗೊಂಬೆ ಆಟ, ಉಳಿಸಿ, ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.
ಕೋಲಾಟ, ಸಣ್ಣಾಟ, ಸಂಪ್ರದಾಯ ಪದ, ಬೀಸುವ ಪದ, ಬಿಸೋಪದ, ಡೊಳ್ಳಿನ ಪದ, ಚೌಡಿಕಿ ಪದಗಳು ಹೀಗೆ ಗ್ರಾಮೀಣ ಭಾಗದ ಜಾನಪದ ಕ್ರೀಡೆಗಳ ಬಗ್ಗೆ ಅರಿವು ಮೂಡಿಸಲು ಮುಂದಿನ ಜನಾಂಗಕ್ಕೆ ಪರಿಚಯಿಸುವ ಉದ್ದೇಶದಿಂದ ವಿಶ್ವ ಜಾನಪದ ದಿನಾಚರಣೆ ಆಚರಿಸುವ ಉದ್ದೇಶ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ವೀಣಾಶ್ರೀ ಮಹಿಳಾ ಕಲಾ ಸಂಘದ ಅಧ್ಯಕ್ಷೆ ಶ್ರೀಮತಿ ಉಷಾ, ಚೌಡಕಿ ಕಲಾವಿದ ಲಕ್ಷ್ಮಣ, ತಾಂಡವ ನೃತ್ಯ ಕಲಾ ಟ್ರಸ್ಟಿನ ಅಧ್ಯಕ್ಷರಾದ ವಿನಯ್ ಮತ್ತು ಇತರರು ಉಪಸ್ಥಿತರಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ
ಸಿರುಗುಪ್ಪದ ಚೌಡಕಿ ಲಕ್ಷ್ಮಣ ಇವರಿಂದ ಚೌಡಕಿ ಪದಗಳ ಗಾಯನ ಎಲ್ಲರನ್ನೂ ಆಕರ್ಷಿಸಿತು.
ಬಳ್ಳಾರಿ ಅಮೃತ ತಂಡದ ಜಾನಪದ ನೃತ್ಯ ಕಾರ್ಯಕ್ರಮಕ್ಕೆ ಮೆರಗು ತಂದರೆ ವೀರೇಶ ದಳವಾಯಿ ಅವರ ಜಾನಪದ ಗೀತಾ ಗಾಯನ ಎಲ್ಲರ ಮನರಂಜಿಸಿತು.
