ಅನುದಿನ ಕವನ-೭೯೦, ಕವಿ: ನಾಗತಿಹಳ್ಳಿ ರಮೇಶ್, ಬೆಂಗಳೂರು,

ರೂಪವ ಕಾಣಲು ಹೋದರೆ ಪಾತ್ರವೋ
ಪಾತ್ರವ ಕಾಣಲು ಹೋದರೆ
ವೇಷವೋ
ವೇಷವ ಕಾಣಲು ಹೋದರೆ
ಅವತಾರವೋ
ಅವತಾರವ ಕಾಣಲು ಹೋದರೆ
ಆಕಾರವೋ
ಆಕಾರವ ಕಾಣಲು ಹೋದರೆ
ವಿಕಾರವೋ

ಎಲ್ಲೋ ಬೀಸಿದ ಗಾಳಿಯು
ಇನ್ನೆಲ್ಲೋ ಹಚ್ಚಿದ
ದೀಪವ ಆರಿಸಿದರೆ
ಗಾಳಿಯ ಉಸಿರಿಗೇನು ಅರ್ಥ?

ನೀರಿಗೆ ರೆಕ್ಕೆ ಬಂದು
ಹಕ್ಕಿಯಾದಿತೆಂಬ ದುರಾಸೆಯಲಿ
ನೀರಿಗೆ ನೀರಿಗೆ ನೀರಿಗೇನೆ
ಬಲೆಹಾಸಿ ಕೂತ ನೀಚ ಜನರು ಕಾಣಾ…

ಆದರೂ
ಇಷ್ಟಾದರೂ

ಕಡಿವ ಹಲ್ಲುಗಳ ನಡುವೆ
ನಾಲಗೆ ಬಾಳುತ್ತಲೇ ಇದೆ
ಮೊಲೆ ಕೂಡ ಕಾಣಾ…

ಕೂಡೋಣ
ಕಟ್ಟೋಣ
ಬಾಳೋಣ
ಬೆಳಗೋಣ


-ನಾಗತಿಹಳ್ಳಿ ರಮೇಶ್, ಬೆಂಗಳೂರು
*****

Leave a Reply

Your email address will not be published. Required fields are marked *