ಕಾವ್ಯ ಕಹಳೆ:ಬುದ್ಧನಾಗುವೆ (ಬುದ್ದ ಪೂರ್ಣಿಮೆಯ ವಿಶೇಷ), ಕವಿ:ನಾಗೇಶ್ ಜೆ. ನಾಯಕ, ಸವದತ್ತಿ

ಬುದ್ದನಾಗುವೆ
(ಗಜಲ್)


ಯಾರೂ ನನ್ನವರಲ್ಲ ಎಂಬ ಸತ್ಯ ತಿಳಿದಾಗಲೇ ನೀ ಬುದ್ಧನಾಗುವೆ
ಎಲ್ಲರೂ ನನ್ನವರೇ ಎಂಬ ಸತ್ಯ ಅರಿತಾಗಲೇ ನೀ ಬುದ್ಧನಾಗುವೆ

ಲೋಕದ ದುಃಖಕೆ ಮೂಲ ಹುಡುಕಿ ಹೊರಡಬೇಕು ಬಿಡುವಿಲ್ಲದಂತೆ
ಇರುವುದೆಲ್ಲವ ತೊರೆದು ನಿತಾಂತ ನಡೆದಾಗಲೇ ನೀ ಬುದ್ಧನಾಗುವೆ

ಜಾತಿ-ಮತಗಳ ಹಂಗು ಹರಿದು ಮನುಷ್ಯತ್ವ ಅಪ್ಪಬೇಕು ಮಗುವಿನಂತೆ
ಬಡವರ ಕಂಬನಿ ಕುಡಿದು ಪ್ರತಿಬಿಂಬವಾಗಿ ನಕ್ಕಾಗಲೇ ನೀ ಬುದ್ಧನಾಗುವೆ

ಸಾಲು ಸಾಲು ಸಾವು-ನೋವುಗಳ ನುಂಗಿಕೊಳ್ಳಬೇಕು ನೀಲಕಂಠನಂತೆ
ಸಹನೆ-ಕರುಣೆಯ ಹಣತೆ ಹಚ್ಚಿ ಬೆಳಕ ತೋರಿದಾಗಲೇ ನೀ ಬುದ್ಧನಾಗುವೆ

ಎಲ್ಲರೂ ನಡೆದ ಹೆದ್ದಾರಿ ಬಿಟ್ಟು ನಿನ್ನದೇ ಕಾಲುದಾರಿ ಹುಡುಕಿ ಸಂತನಂತೆ
ಅರಿವಿನ ಅನಂತ ಪ್ರಭೆಯ ಸಂಗ ಮಾಡಿದಾಗಲೇ ನೀ ಬುದ್ಧನಾಗುವೆ


-ನಾಗೇಶ್ ಜೆ. ನಾಯಕ, ಸವದತ್ತಿ
*****

Leave a Reply

Your email address will not be published. Required fields are marked *