ಅನುದಿನ‌ ಕವನ-೧೦೦೫, ಕವಿ: ಕೆ.ಬಿ.ವೀರಲಿಂಗನಗೌಡ್ರ, ಬಾದಾಮಿ, ಕವನದ ಶೀರ್ಷಿಕೆ:ಗಾಂಧೀ ಅನ್ನೊ ಗಂಧದ ಮರ

ಗಾಂಧೀ ಅನ್ನೊ ಗಂಧದ ಮರ

ಲೋ..
ಸತ್ಯಪ್ಪ ಅಲ್ಲೇಲ್ಲೋ
ಹರೆದ ಹುಡ್ರ ಕಿವಿ ಊದಿ
ಹದಮಾಡಿ ಬಿತ್ತಿದರಂದ್ರ
ಯಾವ ಕಳೆ ಕೊಳೆ ಕೀಟಗಳಿಲ್ದೆ
ಬಂಪರ್ ಬೆಳಿ ತಗಿತಾರಂತೊ ಮಾರಾಯಾ!

ಅವ್ರು
ಅದೇನ್ ಬಿತ್ತಾರೊ ಏನೊ
ಸುಖದ ಸುಪ್ಪತ್ತಿಗ್ಯಾಗ ಇರ್ತಾರಂತಪಾ
ಇಲ್ನೋಡೆ ಸಾಲಮಾಡ್ಕೊಂಡ ಸಾಯಾಕ್ಹತ್ತಿವಿ
ಸುಮ್ಕ ಕಿವ್ಯಾನ್ ಕಮ್ತಕ್ ಕೈ ಹಾಕುನ್ನಡಿಯೊ..

ಲೇ..
ಅಡ್ನೇಡಿ
ಸಡುಗಾಡ ಸುದ್ದಿ ತಂದು
ಹಸನಿದ್ದ ಮನ್ಸ ಹಾಳಗೆಡುಬ್ಯಾಡ
ನಮ್ಮ ಹೊಲ್ದಾಗಿದ್ದ ಗಂಧದ ಮರ
ಹೊಂಚಹಾಕಿ ಹೊಡದವ್ರು ಯಾರಂತಿ?
ಬ್ಯಾರೇ ಯಾರೂ ಅಲ್ಲ ನಿನ್ನ ಕಿವಿ ಊದಿದವ್ರೆ

ಅವ್ರ
ಹಕೀಕತ್ ನಿಂಗಿನ್ನೂ ನಿಕ್ಕಿ ಆಗಿಲ್ಲ
ಅಷ್ಟ ಸುಲುಭಕ್ಕದು ಆಗುದೂ ಇಲ್ಲ
ಕಸ ಹೊಲ್ದಾಗಷ್ಟ ಬೆಳಿಯಲ್ಲೊ
ತಲಿಯಾಗೂ ಬೆಳಿತೈತಿ ಹಸಮಾಡ್ಕೊ..


-ಕೆ.ಬಿ.ವೀರಲಿಂಗನಗೌಡ್ರ, ಬಾದಾಮಿ

Leave a Reply

Your email address will not be published. Required fields are marked *