
ಕಂಪ್ಲಿ, ಜು.24: ದೇಶ ಸ್ವಾತಂತ್ರ್ಯಗಳಿಸುವಲ್ಲಿ ಪತ್ರಿಕೆಗಳ ಪಾತ್ರ ಅನನ್ಯ ಎಂದು ತಹಸೀಲ್ದಾರ್ ಜೂಗಲ ಮಂಜುನಾಯಕ ಅವರು ಹೇಳಿದರು. ಪಟ್ಟಣದ ಶ್ರೀ ವಿದ್ಯಾಸಾಗರ ಇಂಟರ್‌ನ್ಯಾಷನಲ್ ಸ್ಕೂಲ್ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಘಟಕ ಶುಕ್ರವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಸ್ವಾತಂತ್ರ್ಯಕ್ಕಾಗಿ ಹೋರಾಟದ ಕಿಚ್ಚನ್ನು ಪ್ರೇರೇಪಿಸಿ ದೇಶವಾಸಿಗಳನ್ನು ಒಟ್ಟುಗೂಡಿಸಲು ಪತ್ರಿಕೆಗಳು ಮಹತ್ವದ ಪಾತ್ರವಹಿಸಿದ್ದವು ಎಂದು ತಿಳಿಸಿದರು.
ಸ್ವಾತಂತ್ರ್ಯ ನಂತರದ ಪತ್ರಿಕೆಗಳ ಸ್ವರೂಪ ಬದಲಾಗಿದೆ. ಪತ್ರಿಕೆ ಕೇವಲ ಮಾಹಿತಿಕೊಡುವ ಮಾಧ್ಯಮ ಆಗಿಲ್ಲ. ಪತ್ರಿಕಾರಂಗ ಪ್ರಜಾಪ್ರಭುತ್ವದ ನಾಲ್ಕನೆ ಅಂಗವಾಗಿದ್ದು ಸಾಮಾನ್ಯ ಜನರ ಪ್ರತಿಧ್ವನಿಯಾಗಿದೆ ಎಂದು ಶ್ಲಾಘಿಸಿದರು.
ಕಂಪ್ಲಿ ಪಟ್ಟಣದ ಪತ್ರಕರ್ತರು ನಿಖರ ಮಾಹಿತಿ ನೀಡುವಲ್ಲಿ ಮುಂಚೂಣಿಯಲ್ಲಿದ್ದಾರೆ. ಸುದ್ದಿ ಪ್ರಕಟಿಸುವ ಮೊದಲು ಸೂಕ್ತವಾಗಿ ಪರಿಶೀಲಿಸಿ ಪ್ರಕಟಿಸಬೇಕು ಎಂದು ಸಲಹೆ ನೀಡಿದರು.
ಪ್ರಚಲಿತ ವಿದ್ಯಮಾನ, ಜ್ಞಾನ ವೃದ್ಧಿಗೆ ಪತ್ರಿಕೆಗಳು ಸಹಕಾರಿಯಾಗಿವೆ. ಪತ್ರಿಕೆಗಳು ಬರೀ ಮಾಹಿತಿ ನೀಡುವ ಪೇಪರ್ ಅಲ್ಲ ಸಮಾಜದ ಧ್ವನಿಯಾಗಿವೆ ಎಂದು ಮಂಜುನಾಯಕ ಹೇಳಿದರು.
ಮುಖ್ಯ ಅತಿಥಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಎನ್.ವೀರಭದ್ರಗೌಡ ಮಾತನಾಡಿ, ಸೋಶಿಯಲ್ ಮೀಡಿಯಾದಲ್ಲಿ ಬರುವ ಎಲ್ಲ ಸುದ್ದಿಗಳು ನಿಜವಲ್ಲ. ಪತ್ರಿಕೆಗಳು ನಿಖರ ಸುದ್ದಿ ಕೊಡುವಲ್ಲಿ ಮುಂಚೂಣಿಯಲ್ಲಿವೆ ಎಂದು ತಿಳಿಸಿದರು.
ಸುದ್ದಿ ಖಚಿತಪಡಿಸಿಕೊಂಡು ವರದಿ ನೀಡಬೇಕು. ಸರಿಯಾದ ಸುದ್ದಿ, ಮಾಹಿತಿ ಪತ್ರಿಕೆಗಳಿಗೆ ನೀಡುವುದು ಪತ್ರಕರ್ತರ ಹೊಣೆಯಾಗಿದೆ ಎಂದರು.
ಉನ್ನತ ಶಿಕ್ಷಣ, ಹುದ್ದೆಗಳಿಸಲು ಪ್ರಚಲಿತ ವಿದ್ಯಮಾನ ಅರಿಯಲು ವಿದ್ಯಾರ್ಥಿಗಳು ಪತ್ರಿಕೆಗಳನ್ನು ನಿತ್ಯ ಓದುವುದು ಉತ್ತಮ. ಪತ್ರಿಕೆ ಓದುವುದರಿಂದ ಸಾಮಾನ್ಯ ಜ್ಞಾನ, ಪ್ರಚಲಿತ ವಿದ್ಯಮಾನ ಅರಿಯಲು ಸಾಧ್ಯವಾಗುತ್ತದೆ. ಮಾಧ್ಯಮಗಳಿಗೆ ಸಾಮಾಜಿಕ ಜವಾಬ್ದಾರಿ ಇದ್ದು ಅದನ್ನು ಪತ್ರಕರ್ತರು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ನವ ಭಾರತ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಪಿ.ನಾಗೇಶ್ವರರಾವ್ ಅವರು ಮಾತನಾಡಿ, ಸಂವಹನ ಮತ್ತು ಸಂಪರ್ಕ ಮಾಧ್ಯಮಗಳ ಸ್ವರೂಪ ಕಾಲದಿಂದ ಕಾಲಕ್ಕೆ ಬದಲಾಗುತ್ತ ಬಂದಿದೆ ಎಂದರು.
ವಿದ್ಯಾರ್ಥಿಗಳು ಪತ್ರಿಕೆಯಲ್ಲಿ ಎಡಿಟೋರಿಯಲ್ ಪುಟವನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪತ್ರಿಕೆ ಓದುವುದರಿಂದ ಭಾಷಾಜ್ಞಾನ, ಬರವಣಿಗೆ ಕೌಶಲ್ಯಗಳಿಸಲು ಸಾಧ್ಯ. ಪತ್ರಿಕೆ ಓದುವುದರಿಂದ ದೇಶದ ಪರಿಸ್ಥಿತಿ ಅರಿವು ಆಗುತ್ತದೆ ಎಂದು ತಿಳಿಸಿದರು.
ಕಕಾನಿಪ ಸಂಘದ ತಾಲೂಕು ಅಧ್ಯಕ್ಷ ಬಂಗಿ ದೊಡ್ಡ ಮಂಜುನಾಥ ಅಧ್ಯಕ್ಷತೆವಹಿಸಿ ಮಾತನಾಡಿ, ಮೊಬೈಲ್ ಮತ್ತು ಪತ್ರಿಕೆಗಳನ್ನು ಪಠ್ಯ ಚಟುವಟಿಕೆಯನ್ನಾಗಿ ಸದ್ಭಳಕೆ ಮಾಡಿಕೊಂಡಲ್ಲಿ ಭವಿಷ್ಯದಲ್ಲಿ ಉನ್ನತ ಶಿಕ್ಷಣ, ಹುದ್ದೆಗಳಿಸಲು ಸಹಕರಿಯಾಗುತ್ತದೆ ಎಂದರು.
ನಾನಾ ಕ್ಷೇತ್ರಗಳಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಬಿ.ಸಾಯಿನಿಧಿ, ಆರ್.ಹರ್ಷಿಣಿ, ವಿನುತಾ ಸೊಪ್ಪಿಮಠ, ನಸ್ರೀನ್‌ತಾಜ್, ಅಭಿನಂದನ್, ಉತ್ತಮ ದೈಹಿಕ ಶಿಕ್ಷಕ ಎಂ.ಎಂ.ಶರಣಬಸವರಾಜ ಅವರನ್ನು ಗೌರವಿಸಲಾಯಿತು.
ಸಂಘದ ರಾಜ್ಯ ಸಮಿತಿ ಸದಸ್ಯ ಬಸವರಾಜ ಹರನಹಳ್ಳಿ, ವಿದ್ಯಾಸಾಗರ ಇಂಟರ್‌ನ್ಯಾಷನಲ್ ಸ್ಕೂಲ್ ಪ್ರಾಚಾರ್ಯರಾದ ರೋಹಿಣಿ ಸಾಯಿಕಿಶೋರ್, ಅಧಿಕಾರಿಗಳಾದ ಬಸವರಾಜ, ಶಂಭುಲಿಂಗ, ಗುರುಪ್ರಸಾದ್, ಟಿ.ಎಂ.ಬಸವರಾಜ, ಸಂಘದ ಜಿಲ್ಲಾ ಕಾರ್ಯದರ್ಶಿ ದ್ಯಾಮನಗೌಡ ಪಾಟೀಲ್, ಜಿಲ್ಲಾ ಸದಸ್ಯ ಜಿ.ಚಂದ್ರಶೇಖರಗೌಡ, ತಾಲೂಕು ಕಾರ್ಯದರ್ಶಿ ಪಿ.ವೀರೇಶ್, ತಾಲೂಕು ಘಟಕ ಪದಾಧಿಕಾರಿಗಳಾದ ಕರಿ ವಿರುಪಾಕ್ಷಿ, ಎಸ್.ಯಮನಪ್ಪ, ಜೀರು ಗಾದಿಲಿಂಗ, ಎಂ.ಎಸ್.ವಿರುಪಾಕ್ಷಯ್ಯ, ಎಚ್.ಎಂ.ಪಂಡಿತಾರಾಧ್ಯ, ಬಿ.ರಸೂಲ್, ಬಿ.ಎಚ್.ಎಂ. ಗುರುಶಾಂತಶಾಸ್ತ್ರಿ ಇತರರಿದ್ದರು.
—–
