ಸೈಕಲ್ ಇದ್ದವನೇ ಶ್ರೀಮಂತ! ಚಿತ್ರ-ಬರಹ: ಶಂಕರ ಹೆಗ್ಗಡೆ, ಬೆಂಗಳೂರು

ಸೈಕಲ್ ಇದ್ದವನೇ ಶ್ರೀಮಂತ!

“ಅವರ ಮನೆಯಲ್ಲಿ ಸೈಕಲ್ ಇದೆ…”
ಒಂದು ಕಾಲದಲ್ಲಿ ಈ ಒಂದು ಮಾತೇ ಸಾಕಾಗುತ್ತಿತ್ತು. ಊರಿನ ಜನರ ದೃಷ್ಟಿಯಲ್ಲಿ ಆ ಕುಟುಂಬವನ್ನು ಸ್ವಲ್ಪ ಸ್ಥಿತಿವಂತರು ಎಂದು ಗುರುತಿಸಲು. ಇಂದಿನ ಮಕ್ಕಳಿಗೆ ಇದು ಆಶ್ಚರ್ಯವಾಗಬಹುದು. ನಾಲ್ಕು ದಶಕದ ಹಿಂದೆ ಗ್ರಾಮೀಣ ಕರ್ನಾಟಕದ ವಾಸ್ತವ ಇದೇ ಆಗಿತ್ತು.
ಆಗ ಹಳ್ಳಿಗಳಲ್ಲಿ ಎಲ್ಲರ ಮನೆಯಲ್ಲೂ ಸೈಕಲ್ ಇರಲಿಲ್ಲ. ಹೆಚ್ಚಿನ ಜನ ಕಾಲ್ನಡಿಗೆಯಲ್ಲೇ ಓಡಾಡುತ್ತಿದ್ದರು. ದೂರದ ಊರಿಗೆ ಹೋಗಬೇಕಾದರೆ ಬಸ್‌ಗಾಗಿ ಕಾಯಬೇಕಾಗುತ್ತಿತ್ತು. ಇಂತಹ ಸಂದರ್ಭದಲ್ಲಿ ಸ್ವಂತ ಸೈಕಲ್ ಹೊಂದಿದ್ದವರು ಅದೃಷ್ಟವಂತರು. ಅವರ ಸಮಯವೂ ಉಳಿಯುತ್ತಿತ್ತು, ಸಮಾಜದಲ್ಲಿ ಗೌರವವೂ ಹೆಚ್ಚುತ್ತಿತ್ತು.
ಸೈಕಲ್ ಇದ್ದವನೇ ಶ್ರೀಮಂತ ಎಂಬ ಭಾವನೆ ಕೇವಲ ಹಣದ ವಿಷಯವಾಗಿರಲಿಲ್ಲ. ದುಡಿಮೆಯಿಂದ ಜೀವನದಲ್ಲಿ ಸ್ವಲ್ಪ ಮಟ್ಟಿಗೆ ಮುಂದುವರಿದಿದ್ದಾನೆ ಎಂಬ ಸಂಕೇತವಾಗಿತ್ತು. ಬೆಳಿಗ್ಗೆ ಸೈಕಲ್ ಏರಿ ಕೆಲಸಕ್ಕೆ ಹೊರಡುವ ಯುವಕನನ್ನು ಊರಿನವರು ಗೌರವದಿಂದ ನೋಡುತ್ತಿದ್ದರು. ಮದುವೆ ಮಾತುಕತೆಯಲ್ಲಿಯೂ ಸೈಕಲ್‌ಗೆ ವಿಶೇಷ ಸ್ಥಾನವಿತ್ತು. ಮಧ್ಯವರ್ತಿಗಳು ಹೆಮ್ಮೆಯಿಂದ, “ಹುಡಗನಿಗೆ ಸ್ವಂತ ಸೈಕಲ್ ಇದೆ ” ಎಂದು ಹೇಳಿದರೆ ಸಾಕು, ಹುಡುಗನ ಮೌಲ್ಯವೇ ಹೆಚ್ಚಾಗುತ್ತಿತ್ತು. ಆ ಕಾಲದಲ್ಲಿ ಇವುಗಳೇ ಒಬ್ಬ ಯುವಕನ ಸಾಧನೆ ಮತ್ತು ಸ್ಥಿರತೆಯ ಸಂಕೇತಗಳಾಗಿದ್ದವು. ಸೈಕಲ್ ಕೇವಲ ಒಂದು ವಾಹನವಾಗಿರಲಿಲ್ಲ. ಅದು ಮನೆಯ ಸದಸ್ಯನಂತೆಯೇ ಇತ್ತು. ಅದೇ ಸೈಕಲ್‌ನಲ್ಲಿ ಕಿರಾಣಿ ಸಾಮಾನು ಬರುತ್ತಿತ್ತು. ಅದೇ ಸೈಕಲ್‌ನಲ್ಲಿ ಹಾಲು ತರುತ್ತಿದ್ದರು. ಮಕ್ಕಳನ್ನು ಶಾಲೆಗೆ ಬಿಡುತ್ತಿದ್ದರು. ಆಸ್ಪತ್ರೆಗೂ ಅದೇ, ಸಂತೆಗೂ ಅದೇ, ಬಂಧುಗಳ ಮನೆಗೂ ಅದೇ. ಭಾನುವಾರ ಬಂದರೆ ಸೈಕಲ್‌ಗೆ ವಿಶೇಷ ಆರೈಕೆ. ನೀರು ಹಾಕಿ ತೊಳೆದು, ಚಕ್ರಗಳಿಗೆ ಗಾಳಿ ತುಂಬಿಸಿ, ಚೈನ್‌ಗೆ ಎಣ್ಣೆ ಹಾಕಿ, ಹ್ಯಾಂಡಲ್ ಮತ್ತು ರಿಮ್‌ಗಳನ್ನು ಬಟ್ಟೆಯಿಂದ ಒರೆಸಿ ಹೊಳೆಯುವಂತೆ ಮಾಡುತ್ತಿದ್ದರು. ಸೈಕಲ್ ಮಿನುಗಿದರೆ ಮನೆಯವರ ಮುಖದಲ್ಲೂ ಅದೇ ಸಂತೋಷ ಕಾಣಿಸುತ್ತಿತ್ತು. ಇಂದು ಪ್ರತಿಯೊಂದು ಮನೆಯ ಮುಂದೆ ಎರಡು-ಮೂರು ಬೈಕ್‌ಗಳು, ಕಾರುಗಳು ನಿಂತಿರುತ್ತವೆ. ಆದರೆ ಒಂದು ಕಾಲದಲ್ಲಿ ಮನೆಯ ಮುಂದೆ ಒಂದೇ ಒಂದು ಸೈಕಲ್ ನಿಂತಿದ್ದರೂ ಅದು ಆ ಕುಟುಂಬದ ಶ್ರಮ, ಪ್ರಗತಿ ಮತ್ತು ಗೌರವದ ಸಂಕೇತವಾಗಿತ್ತು. ನಿಜವಾಗಿಯೂ, ಆ ಕಾಲದಲ್ಲಿ ಸೈಕಲ್ ಇದ್ದವನೇ ಶ್ರೀಮಂತ. ಸೈಕಲ್ ಕೇವಲ ಎರಡು ಚಕ್ರಗಳ ವಾಹನವಾಗಿರಲಿಲ್ಲ ಅದು ಒಂದು ಕುಟುಂಬದ ಕನಸು, ಪರಿಶ್ರಮ ಮತ್ತು ಸಮಾಜದಲ್ಲಿ ಪಡೆದ ಗೌರವದ ಪ್ರತೀಕವಾಗಿತ್ತು.

-ಶಂಕರ್ ಹೆಗ್ಗಡೆ, ಬೆಂಗಳೂರು

Leave a Reply

Your email address will not be published. Required fields are marked *