ಅವಳು ಯಾರು..?
ಅವನೆಂದನು
“ಚಂದ್ರನ ಹಿಂದೆಯೇ ನಾನಿದ್ದೇನೆ,
ನಕ್ಷತ್ರಗಳ ಹೊಳಪಿನಂತೆಯೇ ನನ್ನ ಪ್ರೇಮ ಮಸುಕಾಗದು
ನಿನಗೆ ನಾನೇ ಅಕ್ಷಯದೀಪ!”
ಆದರೆ ಈ ರಾತ್ರಿ, ನಕ್ಷತ್ರಗಳು ಮೌನವಾಗಿವೆ
ಚಂದ್ರ ಕುಗ್ಗಿಹೋಗಿದ್ದಾನೆ
ಅವನ ತುಟಿಗಳ ಮೇಲೆ ಒಂದು ಮಂದಹಾಸ
ಅವಳ ಹೆಸರನು ಮರೆತು ಹೋದ ಮಂದಹಾಸ!
“ನೀನು ನನ್ನ ರಕ್ತದ ಚಲನೆ,
ನನ್ನ ಗುಂಡಿಗೆಯ ನಿನಾದ…”
ಎಂದು ಹೇಳಿದವನೇ,
ಈಗ ಅವಳ ಹೆಸರನ್ನ ಗಾಳಿಯೊಳಗೆ ಹುಡುಕುತ್ತಿದ್ದಾನೆ!
ನುಡಿದ ಪ್ರತಿಮಾತು, ಒಡೆದ ನಿಶ್ಯಬ್ದ,
ಆಕಾಶದೊಳಗೆ ಎಸೆದ ಒಂದು ಕಪ್ಪು ಗುಲಾಬಿ,
ನಕ್ಷತ್ರಗಳ ಮೌನ ಅವನನ್ನು ಕೇಳಿವೆ,
“ಅವಳು ಯಾರು…?”
ಒಂದು ದಿನ, ಅವನು ಪ್ರತಿಜ್ಞೆ ಮಾಡಿದ್ದ
“ ನಿನ್ನ ಕೈ ಬಿಡಲಾರೆ, ನೆರಳಂತೆಯೇ ನಿನ್ನ ಹಿಂದೆ ನಡೆವೆ!”
ಆದರೆ ಈದಿನ , ಆಕೆಯ ಹೆಸರು ಹೇಳಬೇಕೆಂದು ತುಟಿಗಳು
ತೆರೆಯುವಾಗಲೇ,
ಒಂದು ಶೂನ್ಯ ಸ್ವರ ನಕ್ಕಿತು.
“ ಅವಳ ಪ್ರೀತಿಸುವೆ ” ಎಂದು ಹೇಳುವನವನು,
ಆದರೆ ಯಾರ ಹೆಸರನ್ನು ಕರೆಯುತ್ತಿರುವನೋ ತಿಳಿಯದು.
ಅವಳ ಕಣ್ಣಿರ ಹಿಂದೆ ಮೋಡಗಳ ಮೌನ,
ಮರದ ಬೇರುಗಳಲ್ಲಿ ತೂಗುತ್ತಿರುವ ಒಂದು ಹಳೆಯ ನೆನಪು.
ಒಂದು ಸಲ ನಕ್ಷತ್ರಗಳು ಇಳಿದು ಬಂದವು
ಚಂದ್ರನ ಬೆಳದಿಂಗಳು ಅವನನ್ನು ಎಚ್ಚರಿಸಿತು
ಅವಳ ಹೆಸರ ಕರೆಯಬೇಕೆಂದು ಗುಂಡಿಗೆ ಹಾತೊರೆಯಿತು
ಆದರೆ ಹೆಸರುಗಳೆಲ್ಲಾ ಗಾಳಿಯೊಳಗೆ ಸೇರಿಹೋದವು!
“ನಿನ್ನ ನಾ ಚಂದ್ರನ ಹಾಗೆಯೇ ಪ್ರೇಮಿಸುವೆ” ಎನ್ನುತ್ತಾನೆ,
ಆದರೆ ಅವಳ ಹೆಸರು ತುಟಿಗಳಿಗೆ ನೆನಪೇ ಇಲ್ಲ!
ಒಂದು ಹೂವಿನ ಕಾಂತಿಯು ಮಾಯ, ಒಂದು ರಾತ್ರಿಯ ಗಾಯ ಅಮರ,
ಆ ಹೆಸರು ಈಗ ಭೂಮಿಯಲಿ ಹಳೆಯ ಒಂಟಿ ಬೀಜ.
ಅವನ ಪ್ರೇಮ ಒಂದು ನದಿ
ಅನಂತ ಅಸ್ಪಷ್ಟವಾದುದು
ಆದರೆ ಅವಳ ಹೆಸರು ದಡವಿರದ ಮುಂದಡಿ.
ಇಂದಿಗೂ ಅವಳ ಮಾತುಗಳು ಗಾಳಿಯಲಿ ತೇಲುತ್ತವೆ,
ಆದರೆ ಅವಳ ಹೆಸರು ಮಾತ್ರ ನೀರಲಿ ಕಲ್ಲ ಹಾಗೆ ಮುಳುಗಿ ಹೋಗಿದೆ.
ಅವಳ ನೆನಪುಗಳು ಅವನ ಉಸಿರಲ್ಲಿ ಹೊಗೆಗಳು,
ಹಸರು ಮಾತ್ರ ಒಂದು ಹಳೆಯ ಪೋಟೋದ ಹಾಗೆ ಮರೆತುಹೋದ ಮುಖ.
“ ನೀನು ನನ್ನ ಹೃದಯದೊಳಗೆ ನಿತ್ಯವಿರುತ್ತಿ!” ಎನ್ನುತ್ತಾನೆ.
ಆದರೆ ಆ ಹೃದಯವೀಗ ಒಂದು ಪುಸ್ತಕ
ಪುಟಗಳ ಸಹಿತ ತೆರೆವನಿಲ್ಲದ ಒಂದು ಕಥೆ.
ಮೌನದೊಳಗೆ ಕತ್ತಲೆ ಮಾಯವಾಗುವ ಮೊದಲು,
ಒಂದು ಕಿರುನಗೆ ಮುಳುಗಿ ಹೋಗಿದೆ
ಅವಳ ಹೆಸರನ್ನು ಮರೆತ ಪ್ರಿಯತಮ
ತನ್ನ ನೆರಳನ್ನು ಮಾತ್ರವೇ ನೆನಪಿಟ್ಟುಕೊಂಡಿದ್ದಾನೆ!

ತೆಲುಗು ಮೂಲ: ಮೆರ್ಸಿ ಮಾರ್ಗರೇಟ್

ಕನ್ನಡಕ್ಕೆ :ಡಾ. ಶಿವಕುಮಾರ್ ಕಂಪ್ಲಿ, ದಾವಣಗೆರೆ
