Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ಅನುದಿನ ಕವನ-೧೧೬೦, ಹಿರಿಯ ಕವಿ: ಸಿದ್ಧರಾಮ‌ಕೂಡ್ಲಿಗಿ, ವಿಜಯನಗರ ಜಿ., ಕಾವ್ಯ ಪ್ರಕಾರ:ಗಜಲ್ - Karnataka Kahale

ಅನುದಿನ ಕವನ-೧೧೬೦, ಹಿರಿಯ ಕವಿ: ಸಿದ್ಧರಾಮ‌ಕೂಡ್ಲಿಗಿ, ವಿಜಯನಗರ ಜಿ., ಕಾವ್ಯ ಪ್ರಕಾರ:ಗಜಲ್

ಗಜಲ್

ಬೆಳಕಿನ ನೋಟವನು ನೀಡಲೆಂದೇ ಬಂದೆ ನೀನು ಕತ್ತಲೆಯಾದ ಈ ಬಾಳಿನಲಿ
ಚಂದನೆಯ ದಾರಿಯಲಿ ಕೈಹಿಡಿದು ನಡೆದೆ ನೀನು ದಿಕ್ಕುಗಾಣದ ಈ ಬಾಳಿನಲಿ

ಎಷ್ಟೋ ಪ್ರೇಮದ ಹೂಗಳು ಅರಳಿದವು ಎಲ್ಲರೂ ಅರಿವ ತೆರದಿ ಈ ಲೋಕದಲಿ
ಯಾರೂ ಅರಿಯದ ಒಲವಿನ ಹೂವರಳಿಸಿದೆ ನೀನು ಹಸಿರೇ ಇರದ ಈ ಬಾಳಿನಲಿ

ಪ್ರೀತಿಯೆಂಬುದೇ ಸವೆದುಹೋಯಿತು ಅವರಿವರ ಅಕ್ಷರಗಳ ತುಟಿಗಳಂಚಿನಲಿ
ಮೌನಕೂ ಅರ್ಥ ನೀಡಿ ನನ್ನೆದೆಯಲಿ ಉಸಿರೂದಿದೆ ಚೇತನವಿರದ ಈ ಬಾಳಿನಲಿ

ಯಾರಿಗರಿವಿತ್ತು ಎಲ್ಲೋ ಹೊರಟಿದ್ದ ನಮ್ಮ ದಾರಿಗಳು ಒಂದೆಡೆ ಕೂಡುವವೆಂದು
ಹೆಜ್ಜೆಯೂರದ ಹಾದಿಯಲಿ ಪಥವ ತೋರಿದೆ ನೀನು ಕೊನೆಯಾದ ಈ ಬಾಳಿನಲಿ

ನೀನು ಹೀಗೇ ಪದಗಳಲಿ ಸಿಲುಕಿ ಎಲ್ಲರೂ ಮೆಚ್ಚುವಂತೆ ನರ್ತಿಸುವ ಭಾವವಲ್ಲ
ಸಿದ್ಧನಿಗೆ ಮಾತ್ರ ಒಲಿದು ಬಂದೆ ನೀನು ಯಾರ ನೋಟಕೂ ಸಿಲುಕದ ಈ ಬಾಳಿನಲಿ


-ಸಿದ್ಧರಾಮ ಕೂಡ್ಲಿಗಿ, ವಿಜಯ ನಗರ ಜಿ.