ಅನುದಿನ ಕವನ-೧೪೮೬, ಕವಯತ್ರಿ: ಡಾ. ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ, ಕವನದ ಶೀರ್ಷಿಕೆ:ಮಣ್ಣಿನ ಮರ್ಮ

ಮಣ್ಣಿನ ಮರ್ಮ

ಮಣ್ಣ ಮಹಿಮೆಗೆ
ಮಾನವ ಮಡಕೆಯ ಬಿಂದು
ಆದರೂ ಹಿಸುಕುತಿದೆ
ವಿಷದ ಕಲ್ಮಶ..                                                      ಇದಕೆ ದಂಗಾಗಿದೆ

ಸೂಕ್ಷ್ಮ ನರಕರಳು
ಪ್ರತಿ ಸಲ ಕಣ್ಣೀರ ನೆನೆಯುತ್ತ
ಕೊನೆಯಾಟದ ಬೇಲಿಯ ಕಡೆ
ಕೈ ಮುಗಿಯುತಿದೆ…

ಹುಟ್ಟಿನಿಂದ ಬರೀ ಕಷ್ಟದ
ಮರ್ಮವ ಎದುರಿಸುತ
ಅಗೋಚರ ಶಕ್ತಿಗೆ
ಬೈಯ್ಯಲಾರದೇ ಇತ್ತ ಬಿಡಲಾರದೇ ಕಲ್ಲು ಗುಂಡಿಗೆ
ರೋಷವ ಪ್ರಸರಿಸಿದೆ…..

ಸುತ್ತಲೂ ಕಾಗೆ ಬಾದೆಗಳ
ಹಾವಳಿ ಎದೆಯ ಬಾದೆಯ
ರಕ್ತ ವಿಷವಾಗಿ ಚಿಮ್ಮುತಿದೆ…

ಬದುಕ ಬವಣೆಗೆ ಮಣ್ಣ ಮರ್ಮ ಯಾಕಾದರೂ ಭುವಿಗೆ
ಕಾಣಿಸಿದೆ ಎಂದು ವಟಗುಟ್ಟುತ್ತಿದೆ…

ಜಗದ ದಾರಿಗೆ ಎಲ್ಲವೂ ಸುಂದರ ಆದರೂ ಬಿಡುತ್ತಿಲ್ಲ
ಗೆದ್ದಿಲು ಹುಳು…

ಸಾಂತ್ವನವಿಲ್ಲದೆ ಅಗೋಚರ ಪ್ರಕೃತಿಗೆ ಕೈ ಮುಗಿಯುತಿದೆ
ಹಣದ ನಾಲಿಗೆ ಎಲುವಿಲ್ಲದೆ
ಮಣ್ಣ ನರಕೆ ಗುದ್ದಲಿ ಹಾರೆಯಿಂದ ತಿವಿಯುತಿದೆ….

ಹೇಗೆ ಸಾಗಿಸಲಿ ಮುಂಬರುವ ಕಷ್ಟದ ಅಲೆಯನು ಎಂದು
ಕ್ಷಣ ಕ್ಷಣ ಚಿಂತೆ ಮಾಡುತಿದೆ…

ಸುತ್ತ ನೋಡಿದರೂ ಕಾರ್ಕೋಟಕ ವಿಷದ ಹೊಗೆ
ಜೀವ ತೆಗೆಯುತಿದೆ..

ಮಣ್ಣ ಮರ್ಮ ನಿಟ್ಟುಸಿರು
ಬಿಡುತ್ತ ಕೈ ಕಟ್ಟಿ ಸುಮ್ಮನೆ
ಜಗವ ಗಮನಿಸುತಿದೆ…

-ಡಾ.ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ

Leave a Reply

Your email address will not be published. Required fields are marked *