ಅನುದಿನ ಕವನ-೧೯೧೪, ಕವಿ: ಸಿದ್ದು ಜನ್ನೂರ್, ಚಾಮರಾಜನಗರ

ಇಡಿ ಕೋಣೆ ತುಂಬಾ
ನಿನ್ನ ನೆನಪನ್ನ ತುಂಬಿಕೊಂಡು
ಕಾಯುವುದು ನನಗೀಗ ಖಯ್ಯಾಲಿಯಾಗಿದೆ…

ಗೋಡೆಗೆ ಬಿದ್ದ ನೆರಳು
ನನ್ನ ನಿನ್ನ ಮೊದಲ ಬೇಟಿಯ
ಅಚ್ಚಿಳಿಸಿ ಕಾಡುವಾಗ
ನನ್ನ ನೋಟದ ಎಲ್ಲ ಚಿತ್ರಗಳು
ನೀನೆ ಎಂಬುದು ಕಣ್ಣಿಗೆ ಅಂಟಿದ ಪೊರೆಯಾಗಿದೆ…

ನಾನು ಸೀದಾ ಸಾದಾ ಮನುಷ್ಯ
ಎಂದು ನೀನು ಹೇಳಿಕೊಂಡು
ಪ್ರೇಮ ನಿವೇದಿಸುವಾಗ
ನೀನೆಷ್ಟು ಸಿಂಪಲ್ ಎಂದು ಭಾವಿಸಿದ್ದೆ
ಆದರೀಗ ನನ್ನರಿವಿನ ಪ್ರಶ್ನೆಗೆ
ನೀನು ಉತ್ತರಿಸಲಾಗದೆ ದೂರವೆ ನಿಂತು
ಪ್ರೀತಿ ಕುರುಡೆಂದು ಸಾಬೀತುಪಡಿಸಿದೆ…

ನಾನೋ ಕಾಯುವುದರಲ್ಲೆ ಸುಖ ಕಂಡ
ನಿರ್ಜನ ಗೋಡೆಗಳ ನಡುವೆ
ನಿನ್ನ ಕಂಡಂತೆ ನನ್ನ ಮರೆತ
ಬೆಳಕಿಲ್ಲದ ರಾತ್ರಿಗೆ ಚಂದ್ರನ ಚೂರು ಆಯುವ ಪ್ರೇಮಿ
ನೀನೋ ನಿನ್ನದೆ ದಾರಿಗೆ
ಕತ್ತಲನ್ನೆ ಮಿಯ್ಯುತ್ತ ಬೆಳಕೆಂದು
ಪರಿಭ್ರಮಿಸಿ ನಿಂತ ಮಾಯಾವಿ…


-ಸಿದ್ದು ಜನ್ನೂರ್, ಚಾಮರಾಜನಗರ

Leave a Reply

Your email address will not be published. Required fields are marked *